ಬೆಂಗಳೂರಿನಲ್ಲಿ ಇಂದು ಆರ್‌ಸಿಬಿ vs ಕೆಕೆಆರ್‌ ಬಿಗ್‌ ಫೈಟ್‌

| Published : Mar 29 2024, 12:56 AM IST / Updated: Mar 29 2024, 11:28 AM IST

ಬೆಂಗಳೂರಿನಲ್ಲಿ ಇಂದು ಆರ್‌ಸಿಬಿ vs ಕೆಕೆಆರ್‌ ಬಿಗ್‌ ಫೈಟ್‌
Share this Article
  • FB
  • TW
  • Linkdin
  • Email

ಸಾರಾಂಶ

ತವರಿನ ಅಂಗಳದಲ್ಲಿ ಸತತ 2ನೇ ಗೆಲುವಿಗೆ ಕಾಯುತ್ತಿರುವ ಆರ್‌ಸಿಬಿ. ‘ರಸೆಲ್ಮೇನಿಯಾ’ದಿಂದ ಪಾರಾಗಲು ಫಾಫ್‌ ಪಡೆ ಯೋಜನೆ. ಫಾಫ್‌, ಮ್ಯಾಕ್ಸಿ, ಗ್ರೀನ್ ಮೇಲೆ ತಂಡಕ್ಕೆ ಹೆಚ್ಚಿನ ನಿರೀಕ್ಷೆ. ಬದ್ಧವೈರಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಲು ಕೋಲ್ಕತಾ ಕಾತರ

ಕನ್ನಡಪ್ರಭ ವಾರ್ತೆ ಬೆಂಗಳೂರು

ಐಪಿಎಲ್‌ನ ಪ್ರಮುಖ ಬದ್ಧ ವೈರಿ ತಂಡಗಳೆನಿಸಿಕೊಂಡಿರುವ ಆರ್‌ಸಿಬಿ ಹಾಗೂ ಕೋಲ್ಕತಾ ನಡುವಿನ ರೋಚಕ ಪೈಪೋಟಿಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜುಗೊಂಡಿದೆ. 

ಆರಂಭಿಕ ಪಂದ್ಯದ ಸೋಲಿನ ಹೊರತಾಗಿಯೂ ಬಳಿಕ ಪುಟಿದೆದ್ದು ಗೆದ್ದಿರುವ ಆರ್‌ಸಿಬಿ ತವರಿನ ಅಂಗಳದಲ್ಲಿ ಮತ್ತೊಂದು ಜಯಕ್ಕಾಗಿ ಕಾತರಿಸುತ್ತಿದೆ.

ಉದ್ಘಾಟನಾ ಪಂದ್ಯದಲ್ಲಿ ಚೆನ್ನೈಗೆ ಶರಣಾಗಿದ್ದ ಆರ್‌ಸಿಬಿ, ತವರಿನಲ್ಲಿ ನಡೆದಿದ್ದ ಪಂಜಾಬ್‌ ವಿರುದ್ಧದ ಸೆಣಸಾಟದಲ್ಲಿ ರೋಚಕ ಗೆಲುವು ಸಾಧಿಸಿತ್ತು. ಆದರೆ ಬ್ಯಾಟರ್‌ಗಳ ಸ್ವರ್ಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಬ್ಯಾಟರ್‌ಗಳ ಪ್ರದರ್ಶನ ಹೇಳಿಕೊಳ್ಳುವಂತದ್ದೇನೂ ಆಗಿರಲಿಲ್ಲ. 

177 ರನ್‌ ಗುರಿ ಬೆನ್ನತ್ತಲೂ 19.2 ಓವರ್‌ ಬಳಸಿಕೊಂಡಿದ್ದು ಆರ್‌ಸಿಬಿಯ ಬ್ಯಾಟಿಂಗ್‌ ವಿಭಾಗವೂ ಕಾಗದದ ಮೇಲಿರುವಂತೆ ಬಲಿಷ್ಠವಾಗಿಲ್ಲ ಎಂಬುದು ತೋರಿಸಿಕೊಟ್ಟಿತ್ತು. 

ವಿರಾಟ್‌ ಕೊಹ್ಲಿ ಅಬ್ಬರಿಸಿದ್ದರೂ ವಿದೇಶಿ ತಾರೆಗಳಾದ ನಾಯಕ ಫಾಫ್‌ ಡು ಪ್ಲೆಸಿ, ಗ್ಲೆನ್ ಮ್ಯಾಕ್ಸ್‌ವೆಲ್‌, ಕ್ಯಾಮರೂನ್‌ ಗ್ರೀನ್‌ ಇನ್ನಷ್ಟೇ ತಮ್ಮ ನೈಜ ಪ್ರದರ್ಶನ ನೀಡಬೇಕಿದೆ. 

ರಜತ್‌ ಪಾಟೀದಾರ್‌ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕಿದ್ದು, ಅನುಜ್‌ ರಾವತ್‌, ದಿನೇಶ್‌ ಕಾರ್ತಿಕ್‌ ಮತ್ತು ಮಹಿಪಾಲ್‌ ಲೊಮ್ರೊರ್‌ ಪ್ರದರ್ಶನವೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 

ಮಧ್ಯಮ ಕ್ರಮಾಂಕದ ವೈಫಲ್ಯ ಬೌಲರ್‌ಗಳ ಮೇಲೆ ಒತ್ತಡ ಹೇರಲಿದ್ದು, ಇದನ್ನು ತಪ್ಪಿಸಿದರಷ್ಟೇ ತಂಡಕ್ಕೆ ಗೆಲುವು ದಕ್ಕಲಿದೆ. ಜೋಸೆಫ್‌ರನ್ನು ಹೊರಗಿಟ್ಟು ರೀಸ್‌ ಟಾಪ್ಲಿಯನ್ನು ಆಡಿಸುವ ಸಾಧ್ಯತೆಯೂ ಇದೆ. 

ಬೌಲರ್‌ಗಳಿಗೆ ಅಗ್ನಿಪರೀಕ್ಷೆ: ಕೋಲ್ಕತಾ ಸ್ಫೋಟಕ ಬ್ಯಾಟರ್‌ಗಳಿಗೆ ಹೆಸರುವಾಸಿ. ಅದರಲ್ಲೂ ವಿಂಡೀಸ್‌ ದೈತ್ಯ ಆ್ಯಂಡ್ರೆ ರಸೆಲ್‌ ಅಬ್ಬರಿಸಲು ಶುರು ಮಾಡಿದರಂತೂ ಬೌಲರ್‌ಗಳಿಗೆ ಉಳಿಗಾಲವಿಲ್ಲ. 

ರನ್‌ ಮಳೆ ಹರಿಯುವ ಚಿನ್ನಸ್ವಾಮಿಯಲ್ಲಿ ರಸೆಲ್‌, ಫಿಲ್ ಸಾಲ್ಟ್‌, ರಿಂಕು ಸಿಂಗ್‌ ಅವರಂಥ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಸಿರಾಜ್‌, ಯಶ್‌ ದಯಾಳ್‌, ಜೋಸೆಫ್‌ ಅವರನ್ನೊಳಗೊಂಡ ಬೌಲಿಂಗ್‌ ಪಡೆ ಯಶಸ್ವಿಯಾಗುತ್ತಾ ಕಾದು ನೋಡಬೇಕಿದೆ.

ಮತ್ತೊಂದೆಡೆ ಕೋಲ್ಕತಾ ಕೂಡಾ ಕಳೆದ ಪಂದ್ಯದಲ್ಲಿ ಬೌಲಿಂಗ್‌ ವಿಭಾಗದಲ್ಲಿ ಸಪ್ಪೆಯಾಗಿತ್ತು. ₹20.5 ಕೋಟಿಗೆ ತಂಡಕ್ಕೆ ಸೇರ್ಪಡೆಗೊಂಡಿರುವ ಮಿಚೆಲ್‌ ಸ್ಟಾರ್ಕ್‌ ದುಬಾರಿಯಾಗಿದ್ದರು. 

ತಂಡ ಸ್ಪಿನ್ನರ್‌ಗಳ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದು, ಸುನಿಲ್‌ ನರೈನ್‌, ವರುಣ್‌ ಚಕ್ರವರ್ತಿ, ಸುಯಾಶ್‌ ಶರ್ಮಾ ಮೇಲೆ ಆರ್‌ಸಿಬಿ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಾದ ಅನಿವಾರ್ಯತೆ ಇದೆ. ನಾಯಕ ಶ್ರೇಯಸ್‌ ಅಯ್ಯರ್‌, ವೆಂಕಟೇಶ್‌ ಅಯ್ಯರ್‌, ನಿತೀಶ್‌ ರಾಣಾ ಕೂಡಾ ಲಯಕ್ಕೆ ಮರಳಬೇಕಿದೆ.

ಒಟ್ಟು ಮುಖಾಮುಖಿ: 32ಆರ್‌ಸಿಬಿ: 14ಕೋಲ್ಕತಾ: 18

ಸಂಭವನೀಯ ಆಟಗಾರರ ಪಟ್ಟಿಆರ್‌ಸಿಬಿ: ಡು ಪ್ಲೆಸಿ(ನಾಯಕ), ವಿರಾಟ್‌, ರಜತ್‌, ಮ್ಯಾಕ್ಸ್‌ವೆಲ್‌, ಗ್ರೀನ್, ಕಾರ್ತಿಕ್‌, ಅನುಜ್‌, ಜೋಸೆಫ್‌/ಟಾಪ್ಲಿ, ಮಯಾಂಕ್‌, ಸಿರಾಜ್‌, ದಯಾಳ್‌

ಕೆಕೆಆರ್‌: ಸಾಲ್ಟ್‌, ವೆಂಕಟೇಶ್‌, ಶ್ರೇಯಸ್‌(ನಾಯಕ), ನಿತೀಶ್‌, ರಿಂಕು, ರಮನ್‌ದೀಪ್‌, ರಸೆಲ್‌, ನರೈನ್‌, ಸ್ಟಾರ್ಕ್‌, ಹರ್ಷಿತ್‌, ವರುಣ್‌ ಚಕ್ರವರ್ತಿಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.

2015ರ ಬಳಿಕ ಚಿನ್ನಸ್ವಾಮಿಯಲ್ಲಿ ಕೆಕೆಆರ್‌ ವಿರುದ್ಧ ಗೆದ್ದಿಲ್ಲ ಆರ್‌ಸಿಬಿ!

ಆರ್‌ಸಿಬಿ ತಂಡ ಕೆಕೆಆರ್‌ ವಿರುದ್ಧ 2015ರ ನಂತರ ಒಂದೂ ಪಂದ್ಯದಲ್ಲಿ ಗೆದ್ದಿಲ್ಲ. 2015ರ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡ ಕೋಲ್ಕತಾವನ್ನು ಸೋಲಿಸಿತ್ತು. 

ಆ ಬಳಿಕ 2016, 2017, 2018, 2019 ಹಾಗೂ 2023ರಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಕೆಕೆಆರ್‌ಗೆ ಆರ್‌ಸಿಬಿ ಶರಣಾಗಿದೆ. ಈ ಬಾರಿ ಸೋಲಿನ ಸರಪಳಿ ಕಳಚಳು ಕಾಯುತ್ತಿದೆ.