‘ನಡಾಲ್‌, ನೀವು ಟೆನಿಸ್‌ ಲೋಕಕ್ಕೆ ಹೆಮ್ಮೆ: ವಿದಾಯದ ಹೊಸ್ತಿಲಲ್ಲಿರುವ ರಾಫಾಗೆ ಫೆಡರರ್‌ ಭಾವುಕ ಪತ್ರ

| Published : Nov 20 2024, 12:30 AM IST

‘ನಡಾಲ್‌, ನೀವು ಟೆನಿಸ್‌ ಲೋಕಕ್ಕೆ ಹೆಮ್ಮೆ: ವಿದಾಯದ ಹೊಸ್ತಿಲಲ್ಲಿರುವ ರಾಫಾಗೆ ಫೆಡರರ್‌ ಭಾವುಕ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ನಿಮ್ಮದು ಎಂಥಾ ಅದ್ಭುತ ಪಯಣ. ನಿಮ್ಮ ಹಳೆ ಅಭಿಮಾನಿಯಾಗಿ ನಾನು ಯಾವತ್ತೂ ನಿಮ್ಮ ಜೊತೆಗಿದ್ದೇನೆ, ನಿಮಗಾಗಿ ಚಿಯರ್ಸ್‌ ಮಾಡುತ್ತೇನೆ ಎಂದು ಫೆಡರರ್‌ ಹೇಳಿದ್ದಾರೆ.

ಮಾಲಗ(ಸ್ಪೇನ್‌): ವಿದಾಯದ ಹೊಸ್ತಿಲಲ್ಲಿರುವ ಸ್ಪೇನ್‌ನ ದಿಗ್ಗಜ ಟೆನಿಸಿಗ ರಾಫೆಲ್‌ ನಡಾಲ್‌ಗೆ ಅವರ ಪ್ರಮುಖ ಪ್ರತಿ ಸ್ಪರ್ಧಿ, ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌ ಭಾವನಾತ್ಮಕ ಪತ್ರ ಬರೆದಿದ್ದಾರೆ. ನೀವು ಇಡೀ ಟೆನಿಸ್‌ ಲೋಕಕ್ಕೆ ಹೆಮ್ಮೆ ತಂದಿದ್ದೀರಿ ಎಂದು ನಡಾಲ್‌ರನ್ನು ಕೊಂಡಾಡಿದ್ದಾರೆ. ಕಳೆದೆರಡು ವರ್ಷಗಳಿಂದ ಪಕ್ಕೆಲುಬು ಗಾಯದಿಂದ ಬಳಲುತ್ತಿರುವ 22 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನಡಾಲ್‌, ಡೇವಿಸ್‌ ಕಪ್‌ನಲ್ಲಿ ಸ್ಪೇನ್‌ ಪರ ಕೊನೆ ಬಾರಿ ಆಡುವುದಾಗಿ ಇತ್ತೀಚೆಗಷ್ಟೇ ಮಾಹಿತಿ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಫೆಡರರ್‌ ಎಕ್ಸ್‌(ಟ್ವೀಟರ್‌)ನಲ್ಲಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ‘ನಡಾಲ್‌, ಟೆನಿಸ್‌ನಿಂದ ನಿವೃತ್ತಿಯಾಗುವ ಈ ಕ್ಷಣ ನಿಮ್ಮಲ್ಲಿ ಕೆಲ ಸಂಗತಿಗಳನ್ನು ಹಂಚಿಕೊಳ್ಳಬೇಕಿದೆ. ನಾನು ನಿಮ್ಮನ್ನು ಸೋಲಿಸಿದ್ದಕ್ಕಿಂತ ಜಾಸ್ತಿ ನೀವೇ ನನ್ನನ್ನು ಸೋಲಿಸಿದ್ದೀರಿ. ಇತರರಿಗಿಂತ ಹೆಚ್ಚಾಗಿ ನನಗೆ ದೊಡ್ಡ ಸವಾಲಾಗಿದ್ದು ನೀವು. ಆದರೆ ನಿಜವಾಗಿಯೂ ನಾನು ಆಟವನ್ನು ಹೆಚ್ಚಾಗಿ ಆನಂದಿಸಿದ್ದು ನಿಮ್ಮಿಂದಲೇ. ಬಹುತೇಕ ಒಂದೇ ಸಮಯಕ್ಕೆ ಟೆನಿಸ್‌ಗೆ ಕಾಲಿಟ್ಟ ನಾವು, ಒಂದೇ ಸಮಯಕ್ಕೆ ಆಟದಿಂದ ದೂರವಾಗುತ್ತಿದ್ದೇವೆ. ನಿಮ್ಮದು ಎಂಥಾ ಅದ್ಭುತ ಪಯಣ. ನೀವು ಸ್ಪೇನ್‌ ಜೊತೆ ಇಡೀ ಟೆನಿಸ್‌ ಲೋಕವನ್ನೇ ಹೆಮ್ಮೆ ಪಡುವಂತೆ ಮಾಡಿದ್ದೀರಿ. 2022ರ ಲೇವರ್‌ ಕಪ್‌ನಲ್ಲಿ, ನನ್ನ ವಿದಾಯ ಪಂದ್ಯದಲ್ಲಿ ನಿಮ್ಮ ಜೊತೆ ಅಂಕಣ ಹಂಚಿಕೊಂಡಿದ್ದು ನನ್ನ ವೃತ್ತಿಬದುಕಿನ ಶ್ರೇಷ್ಠ ಕ್ಷಣಗಳಲ್ಲಿ ಒಂದು. ನಿಮ್ಮ ಹಳೆ ಅಭಿಮಾನಿಯಾಗಿ ನಾನು ಯಾವತ್ತೂ ನಿಮ್ಮ ಜೊತೆಗಿದ್ದೇನೆ, ನಿಮಗಾಗಿ ಚಿಯರ್ಸ್‌ ಮಾಡುತ್ತೇನೆ’ ಎಂದು ಫೆಡರರ್‌ ಹೇಳಿದ್ದಾರೆ. ನಡಾಲ್‌ ಹಾಗೂ ಫೆಡರರ್‌ 40 ಬಾರಿ ಪರಸ್ಪರ ಮುಖಾಮುಖಿಯಾಗಿದ್ದು, ನಡಾಲ್‌ 26ರಲ್ಲಿ, ಫೆಡರರ್‌ 14 ಪಂದ್ಯಗಳಲ್ಲಿ ಗೆದ್ದಿದ್ದಾರೆ. ಇಬ್ಬರ ನಡುವೆ ನಡೆದ 9 ಗ್ರ್ಯಾನ್‌ಸ್ಲಾಂ ಫೈನಲ್‌ ಪೈಕಿ 6 ಬಾರಿ ನಡಾಲ್‌ ಚಾಂಪಿಯನ್‌ ಎನಿಸಿಕೊಂಡಿದ್ದಾರೆ. 20 ಬಾರಿ ಗ್ರ್ಯಾನ್‌ಸ್ಲಾಂ ಗೆದ್ದಿರುವ ಫೆಡರರ್‌ 2022ರಲ್ಲಿ ನಿವೃತ್ತಿಯಾಗಿದ್ದಾರೆ.ನಿವೃತ್ತಿಯ ಟೂರ್ನಿಗೆ ವಿಶೇಷ ಕಿಟ್‌ ನೀಡಿದ ಬಾಬೊಲಾಟ್‌!1995ರಿಂದ ನಡಾಲ್‌ರ ಅಧಿಕೃತ ಕಿಟ್‌ ಪ್ರಾಯೋಜಕರಾಗಿರುವ ಫ್ರಾನ್ಸ್‌ನ ಕ್ರೀಡಾ ಉಪಕರಣಗಳ ಸಂಸ್ಥೆ ಬಾಬೊಲಾಟ್‌, ನಿವೃತ್ತಿಯ ಪಂದ್ಯಕ್ಕಾಗಿ ನಡಾಲ್‌ಗೆ ವಿಶೇಷ ಕಿಟ್‌ ಬ್ಯಾಗ್‌ ಒದಗಿಸಿದೆ. ಬ್ಯಾಗ್‌ ಮೇಲೆ ನಡಾಲ್‌ ಜೊತೆಗಿನ ವೃತ್ತಿಪರ ಬಾಂಧವ್ಯದ ಅಂಕಿ-ಅಂಶಗಳನ್ನು ಮುದ್ರಿಸಲಾಗಿದೆ. 29 ವರ್ಷದಲ್ಲಿ 1250 ರಾಕೆಟ್‌, 300 ಕಿ.ಮೀ. ಉದ್ದದಷ್ಟು ಸ್ಟ್ರಿಂಗ್ಸ್‌ ಪೂರೈಕೆ ಮಾಡಿರುವುದಾಗಿ ಬ್ಯಾಗ್‌ನಲ್ಲಿ ಬರೆಯಲಾಗಿದ್ದು, ಗ್ರ್ಯಾನ್‌ಸ್ಲಾಂ ಸೇರಿದಂತೆ ನಡಾಲ್‌ ಗೆದ್ದಿರುವ ಟೂರ್ನಿಗಳ ಬಗ್ಗೆಯೂ ಮಾಹಿತಿಯಿದೆ. ನಡಾಲ್‌ ಇದೇ ಸಂಸ್ಥೆಯ ರಾಕೆಟ್‌ಗಳನ್ನು ಬಳಸಿ 22 ಗ್ರ್ಯಾನ್‌ ಸ್ಲಾಂ ಸೇರಿ 92 ಎಟಿಪಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.