ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ಕಠಿಣ ಅಭ್ಯಾಸ -ವಾಪಸಾಗಲು ರಿಷಭ್‌ ಪಂತ್‌ ಕಾತರ

| Published : Sep 17 2024, 12:47 AM IST / Updated: Sep 17 2024, 04:18 AM IST

ಸಾರಾಂಶ

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ಕಠಿಣ ಅಭ್ಯಾಸ. 3 ಸ್ಪಿನ್ನರ್ಸ್‌, 2 ವೇಗಿಗಳೊಂದಿಗೆ ಭಾರತ ಕಣಕ್ಕಿಳಿಯುವ ಸಾಧ್ಯತೆ. ಟೆಸ್ಟ್‌ ಕ್ರಿಕೆಟ್‌ಗೆ ವಾಪಸಾಗಲು ರಿಷಭ್‌ ಪಂತ್‌ ಕಾತರ.

ಚೆನ್ನೈ: ಬಾಂಗ್ಲಾದೇಶ ವಿರುದ್ಧ ಸೆ.19ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, 2 ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಲು ಎದುರು ನೋಡುತ್ತಿದೆ. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಭಾರತ, ಸತತ 3ನೇ ಬಾರಿಗೆ ಫೈನಲ್‌ ಪ್ರವೇಶಿಸಬೇಕಿದ್ದರೆ ಬಾಕಿ ಇರುವ 10 ಟೆಸ್ಟ್‌ಗಳಲ್ಲಿ ಕನಿಷ್ಠ 6ರಿಂದ 7 ಪಂದ್ಯಗಳನ್ನು ಗೆಲ್ಲಬೇಕಿದೆ. ತವರಿನಲ್ಲಿ ಬಾಂಗ್ಲಾ ವಿರುದ್ಧ 2 ಹಾಗೂ ನ್ಯೂಜಿಲೆಂಡ್‌ ವಿರುದ್ಧ 3 ಟೆಸ್ಟ್‌ಗಳು ಇದ್ದು, ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ 5 ಟೆಸ್ಟ್‌ಗಳನ್ನು ಆಡಲಿದೆ.

ಸೋಮವಾರ, ಭಾರತೀಯ ಆಟಗಾರರು 3 ಗಂಟೆಗೆ ಹೆಚ್ಚು ಕಾಲ ಅಭ್ಯಾಸ ನಡೆಸಿದರು. ತಾರಾ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಯಶಸ್ವಿ ಜೈಸ್ವಾಲ್‌, ಶುಭ್‌ಮನ್‌ ಗಿಲ್‌ ಬ್ಯಾಟಿಂಗ್‌ ಜೊತೆ ಫೀಲ್ಡಿಂಗ್‌ ಅಭ್ಯಾಸ ನಡೆಸಿದರೆ, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್ ಸಿರಾಜ್‌, ಆರ್‌.ಅಶ್ವಿನ್‌, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ಬಹಳ ಹೊತ್ತು ನೆಟ್ಸ್‌ನಲ್ಲಿ ಬೌಲ್‌ ಮಾಡಿದರು.

ಅಭ್ಯಾಸದ ದೃಶ್ಯಗಳನ್ನು ಗಮನಿಸಿದಾಗ, ಭಾರತ ಮೊದಲ ಟೆಸ್ಟ್‌ನಲ್ಲಿ ಮೂವರು ಸ್ಪಿನ್ನರ್‌ಗಳು ಹಾಗೂ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯೇ ಹೆಚ್ಚು ಎನಿಸುತ್ತಿದೆ. 3ನೇ ಸ್ಪಿನ್ನರ್‌ ಸ್ಥಾನಕ್ಕೆ ಕುಲ್ದೀಪ್‌ ಹಾಗೂ ಅಕ್ಷರ್ ನಡುವೆ ಪೈಪೋಟಿ ಏರ್ಪಡಬಹುದು.

ಇನ್ನು, ರಿಷಭ್‌ ಪಂತ್‌ ಟೆಸ್ಟ್‌ ಕ್ರಿಕೆಟ್‌ಗೆ ವಾಪಸಾಗಲು ಕಾತರಿಸುತ್ತಿದ್ದು ಅವರನ್ನೇ ಆಡಿಸುವ ಸಾಧ್ಯತೆ ಹೆಚ್ಚು. ಹೀಗಾಗಿ, ಇಂಗ್ಲೆಂಡ್‌ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಧೃವ್‌ ಜುರೆಲ್‌ ಬೆಂಚ್‌ ಕಾಯಬೇಕಾಗಬಹುದು.