ಸಾರಾಂಶ
ಸಿಡ್ನಿ: ಭಾರತ ತಂಡದ ಕಾಯಂ ನಾಯಕ ರೋಹಿತ್ ಶರ್ಮಾ ಶನಿವಾರ ತಮ್ಮ ನಿವೃತ್ತಿ ಬಗ್ಗೆ ಎದ್ದಿರುವ ವದಂತಿಗಳಿಗೆ ತೆರೆ ಎಳೆದರು. ಸದ್ಯಕ್ಕೆ ನಾನೆಲ್ಲೂ ಹೋಗುತ್ತಿಲ್ಲ, ನಾನು ಯಾವಾಗ ನಿವೃತ್ತಿ ಪಡೆಯಬೇಕು ಎನ್ನುವುದನ್ನು ಮತ್ತಿನ್ಯಾರೋ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸರಣಿಯ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರೋಹಿತ್, ಮಾಧ್ಯಮಗಳಲ್ಲಿ ತಮ್ಮ ನಿವೃತ್ತಿ ಬಗ್ಗೆ ಆಗುತ್ತಿರುವ ಚರ್ಚೆ ಹಾಗೂ ಆ ಸಂಬಂಧ ಪ್ರಕಟಗೊಂಡಿರುವ ವರದಿಗಳ ಬಗ್ಗೆ ಸಿಟ್ಟಾದರು.
‘ನಾನು ನಿವೃತ್ತಿಯಾಗುತ್ತಿಲ್ಲ. ಸದ್ಯಕ್ಕೆ ನಾನು ಫಾರ್ಮ್‌ನಲ್ಲಿ ಇಲ್ಲ. ನನ್ನ ಬ್ಯಾಟ್‌ನಿಂದ ರನ್ ಬರುತ್ತಿಲ್ಲ. ಈ ಕಾರಣಕ್ಕೆ ನಾನು ಸಿಡ್ನಿ ಟೆಸ್ಟ್‌ನಲ್ಲಿ ಆಡದಿರಲು ನಿರ್ಧರಿಸಿದೆ. ಯಾರೋ ಮೈಕ್ ಹಿಡಿದು ಮಾತನಾಡುವವರು, ಲ್ಯಾಪ್‌ಟಾಪ್, ಪೆನ್ನು, ಕಾಗದ ಹಿಡಿದು ಕೂತವರು ನನ್ನ ಕ್ರಿಕೆಟ್ ಬದುಕಿನ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ರೋಹಿತ್ ಸಿಟ್ಟಿನಲ್ಲಿ ಮಾತನಾಡಿದರು.
‘ಸಿಡ್ನಿಗೆ ಬಂದಿಳಿದ ನಂತರ ನಾನು ಈ ಪಂದ್ಯದಲ್ಲಿ ಆಡದಿರಲು ನಿರ್ಧರಿಸಿದೆ. ಮೆಲ್ಬರ್ನ್‌ನಲ್ಲಿ ಯಾವುದೇ ಚರ್ಚೆ, ನಿರ್ಧಾರ ಆಗಿರಲಿಲ್ಲ. ತಂಡದ ಹಿತದೃಷ್ಟಿಯಿಂದ ಕೋಚ್‌ಗಳ ಜೊತೆ ಮಾತನಾಡಿ ನಾನೇ ಸ್ವತಃ ತೆಗೆದುಕೊಂಡ ನಿರ್ಧಾರವಿದು’ ಎಂದು ಸ್ಪಷ್ಟನೆ ನೀಡಿದರು.ನನಗೂ ಬುದ್ಧಿ ಇದೆ: ನಿವೃತ್ತಿ ವಿಚಾರದ ಬಗ್ಗೆ ಇನ್ನಷ್ಟು ಮಾತನಾಡಿದ ರೋಹಿತ್, ‘ನನಗೂ ಪ್ರಬುದ್ಧತೆ ಇದೆ. ಹಲವಾರು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಅಲ್ಲದೇ 2 ಮಕ್ಕಳ ತಂದೆ. ನನ್ನ ತಲೆಯಲ್ಲೂ ಸ್ವಲ್ಪ ಬುದ್ಧಿ ಇದೆ. ಯಾವಾಗ ಏನು ಮಾಡಬೇಕೆಂದು ನನಗೆ ಗೊತ್ತಿದೆ’ ಎಂದು ರೋಹಿತ್, ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳ ಬಗ್ಗೆ ಕಿಡಿ ಕಾಡಿದರು. ರೋಹಿತ್ ಸದ್ಯದಲ್ಲೇ ಟೆಸ್ಟ್‌ನಿಂದ ನಿವೃತ್ತಿಯಾಗಲಿದ್ದಾರೆ. ಡ್ರೆಸ್ಸಿಂಗ್ ಕೋಣೆಯಲ್ಲಿ ರೋಹಿತ್ ಹಾಗೂ ಗಂಭೀರ್ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನುವ ವರದಿಗಳು ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಇದಕ್ಕೆ ಸಂಬಂಧಿಸಿ ರೋಹಿತ್ ಪ್ರತಿಕ್ರಿಯೆ ನೀಡಿದ್ದಾರೆ.