ಆರ್‌ಸಿಬಿಯನ್ನು ಅದರದೇ ತವರಲ್ಲಿ ಸೋಲಿಸುವ ಕಠಿಣ ಟಾಸ್ಕ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಯಶಸ್ವಿ

| N/A | Published : Apr 03 2025, 12:34 AM IST / Updated: Apr 03 2025, 05:03 AM IST

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗಳ ಸದ್ದಡಗಿಸುವುದು ಹೊಸತೇನು ಅಲ್ಲದಿದ್ದರೂ, ಅಷ್ಟು ಸುಲಭದ್ದೇನಲ್ಲ.

ನಾಸಿರ್‌ ಸಜಿಪ

 ಬೆಂಗಳೂರು :  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗಳ ಸದ್ದಡಗಿಸುವುದು ಹೊಸತೇನು ಅಲ್ಲದಿದ್ದರೂ, ಅಷ್ಟು ಸುಲಭದ್ದೇನಲ್ಲ. ಈ ಸಲ ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಆರ್‌ಸಿಬಿಯನ್ನು ಅದರದೇ ತವರಲ್ಲಿ ಸೋಲಿಸುವ ಕಠಿಣ ಟಾಸ್ಕ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಯಶಸ್ವಿಯಾಗಿದೆ. 

ಬುಧವಾರ ಬೆಂಗಳೂರಿನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿಯನ್ನು ಶುಭ್‌ಮನ್‌ ಗಿಲ್‌ ನಾಯಕತ್ವದ ಗುಜರಾತ್‌ 8 ವಿಕೆಟ್‌ಗಳಿಂದ ಹೊಸಕಿ ಹಾಕಿತು. ಸೋಲಿನ ಆರಂಭ ಪಡೆದಿದ್ದ ಗುಜರಾತ್‌ ಸತತ 2ನೇ ಪಂದ್ಯದಲ್ಲಿ ಜಯಗಳಿಸಿತು. 

ಚೇಸಿಂಗ್‌ ಸುಲಭವಾಗಬಹುದಾಗಿದ್ದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ಕಲೆಹಾಕಿದ್ದು 169 ರನ್. ಆರಂಭಿಕ ಆಘಾತಕ್ಕೊಳಗಾದ ಹೊರತಾಗಿಯೂ ತಂಡ ಪುಟಿದೆದ್ದಿತು. ಆದರೆ ಈ ಗುರಿಯನ್ನು ರಕ್ಷಿಸಿಕೊಳ್ಳಲು ಆರ್‌ಸಿಬಿ ಬೌಲರ್ಸ್‌ಗೆ ಸಾಧ್ಯವಾಗಲಿಲ್ಲ. ಗುಜರಾತ್‌ 17.5 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು.

ಆರ್‌ಸಿಬಿಯಂತೆಯೇ ಗುಜರಾತ್‌ನ ಆರಂಭ ಕೂಡಾ ಸಪ್ಪೆಯಾಗಿತ್ತು. ಮೊದಲ 3 ಓವರ್‌ಗಳಲ್ಲಿ ಕೇವಲ 15 ರನ್‌ ಬಂತು. ಆದರೆ 4ನೇ ಓವರ್‌ನಿಂದ ರನ್‌ ವೇಗಿ ಹೆಚ್ಚಿತು. 5ನೇ ಓವರ್‌ನಲ್ಲಿ ಗಿಲ್(14) ಔಟಾದರೂ, ಸಾಯ್‌ ಸುದರ್ಶನ್‌ ಹಾಗೂ ಜೋಸ್‌ ಬಟ್ಲರ್ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. 36 ಎಸೆತಕ್ಕೆ 49 ರನ್‌ ಗಳಿಸಿ ಸುದರ್ಶನ್‌ ಔಟಾದ ಬಳಿಕ, ಬಟ್ಲರ್‌ 39 ಎಸೆತಗಳಲ್ಲಿ 73 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು. ವಿಕೆಟ್‌ ಕೀಪಿಂಗ್‌ ವೇಳೆ ಕ್ಯಾಚ್‌, ಸ್ಟಂಪೌಟ್‌ ಅವಕಾಶ ಕೈಚೆಲ್ಲಿದ್ದ ಬಟ್ಲರ್‌, ಬ್ಯಾಟಿಂಗ್‌ನಲ್ಲಿ ತಂಡವನ್ನು ಕಾಪಾಡಿದರು. 

ಶೆರ್ಫಾನೆ ರುಥರ್‌ಫೋರ್ಡ್‌ 18 ಎಸೆತಕ್ಕೆ 30 ರನ್‌ ಸಿಡಿಸಿದರು.ಕುಸಿದು ಪುಟಿದೆದ್ದ ಆರ್‌ಸಿಬಿ: ಇದಕ್ಕೂ ಮುನ್ನ, ಆರ್‌ಸಿಬಿ ಪಡೆದಿದ್ದ ಆರಂಭ ಕಂಡು ಅಭಿಮಾನಿಗಳೇ ದಂಗಾಗಿದ್ದರು. ಮೊಹಮ್ಮದ್‌ ಸಿರಾಜ್‌ರ ಮಾರಕ ಸ್ಪೆಲ್‌ ಆರ್‌ಸಿಬಿಯನ್ನು ಕಂಗೆಡಿಸಿತ್ತು. 2ನೇ ಓವರ್‌ನಲ್ಲಿ ಅರ್ಶದ್‌ ಖಾನ್‌ ಎಸೆತದಲ್ಲಿ ಕೊಹ್ಲಿ(7 ರನ್‌) ಕ್ಲೀನ್‌ ಬೌಲ್ಡ್‌ ಆದರು. ತಮ್ಮ ಮುಂದಿನ 2 ಓವರ್‌ಗಳಲ್ಲಿ ದೇವದತ್‌ ಪಡಿಕ್ಕಲ್‌, ಫಿಲ್‌ ಸಾಲ್ಟ್‌ಗೆ ಸಿರಾಜ್‌ ಪೆವಿಲಿಯನ್‌ ಹಾದಿ ತೋರಿದರು. ಬಳಿಕ ತಂಡಕ್ಕೆ ಆಸರೆಯಾಗಿದ್ದು ಲಿಯಾಮ್‌ ಲಿವಿಂಗ್‌ಸ್ಟೋನ್‌ ಹಾಗೂ ಜಿತೇಶ್‌ ಶರ್ಮಾ.

 ಈ ಜೋಡಿ ಅರ್ಧಶತಕ ಜೊತೆಯಾಟವಾಡಿತು. ಜಿತೇಶ್‌ 33, ಲಿವಿಂಗ್‌ಸ್ಟೋನ್‌ 54 ರನ್‌ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಟಿಮ್‌ ಡೇವಿಡ್‌ 18 ಎಸೆತಕ್ಕೆ 32 ರನ್‌ ಚಚ್ಚಿ, ತಂಡದ ಮಾನ ಉಳಿಸಿದರು. ಇನ್ನಿಂಗ್ಸ್‌ ಉದ್ದಕ್ಕೂ ಬೆಂಕಿಯುಗುಳಿದ ಸಿರಾಜ್‌ 19 ರನ್‌ಗೆ 3 ವಿಕೆಟ್‌ ಕಿತ್ತರೆ, ಸಾಯ್‌ ಕಿಶೋರ್‌ 4 ಓವರಲ್ಲಿ 22 ರನ್‌ಗೆ 2 ವಿಕೆಟ್‌ ಪಡೆದರು.ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 169/8 (ಲಿವಿಂಗ್‌ಸ್ಟೋನ್‌ 54, ಜಿತೇಶ್‌ 33, ಡೇವಿಡ್‌ 32, ಸಿರಾಜ್‌ 3-19, ಕಿಶೋರ್‌ 2-22), ಗುಜರಾತ್‌ 17.5 ಓವರಲ್ಲಿ 170/2 (ಬಟ್ಲರ್‌ ಔಟಾಗದೆ 73, ಸುದರ್ಶನ್ 49, ರುಥರ್‌ಫೋರ್ಡ್‌ ಔಟಾಗದೆ 30, ಭುವನೇಶ್ವರ್ 1-23)