ಕ್ಲಾಸೆನ್‌ ಕಿಚ್ಚಿಗೂ ಬೆಚ್ಚದ ಕೋಲ್ಕತಾ ನೈಟ್‌ ರೈಡರ್ಸ್‌!

| Published : Mar 24 2024, 01:34 AM IST / Updated: Mar 24 2024, 01:28 PM IST

ಸಾರಾಂಶ

ಸನ್‌ರೈಸರ್ಸ್‌ ವಿರುದ್ಧ ಕೋಲ್ಕತಾಗೆ 4 ರನ್‌ ರೋಚಕ ಗೆಲುವು. ರಸೆಲ್‌ 25 ಎಸೆತದಲ್ಲಿ 64, ಸಾಲ್ಟ್‌ 54. ಕೆಕೆಆರ್‌ 7 ವಿಕೆಟ್‌ಗೆ 208 ರನ್‌. 29 ಎಸೆತದಲ್ಲಿ ಕ್ಲಾಸೆನ್‌ 63, ಆದ್ರೂ ಹೈದ್ರಾಬಾದ್‌ಗೆ ಸಿಗದ ಜಯ. 7 ವಿಕೆಟ್‌ಗೆ 204 ರನ್‌

ಕೋಲ್ಕತಾ: ಹೆನ್ರಿಚ್ ಕ್ಲಾಸೆನ್‌ ಸಾಹಸಿಕ ಹೋರಾಟದ ಹೊರತಾಗಿಯೂ 17ನೇ ಆವೃತ್ತಿ ಐಪಿಎಲ್‌ನಲ್ಲಿ ಮಾಜಿ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾಬಾದ್‌ ವೀರೋಚಿತ ಸೋಲಿನ ಆರಂಭ ಪಡೆದಿದೆ. 

ಸಿಕ್ಸರ್‌ಗಳ ಸುರಿಮಳೆಗೆ ಸಾಕ್ಷಿಯಾದ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ 4 ರನ್ ರೋಚಕ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಕೋಲ್ಕತಾ 7 ವಿಕೆಟ್‌ ಕಳೆದುಕೊಂಡು ಬರೋಬ್ಬರಿ 208 ರನ್‌ ಕಲೆಹಾಕಿತು. 

ಬೃಹತ್‌ ಗುರಿ ಬೆನ್ನತ್ತಿದ ಹೈದರಾಬಾದ್‌ ಕ್ಲಾಸೆನ್‌ ಸಾಹಸದ ಹೊರತಾಗಿಯೂ 7 ವಿಕೆಟ್‌ಗೆ 204 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಆರಂಭಿಕರಾದ ಮಯಾಂಕ್‌ ಅಗರ್‌ವಾಲ್‌ ಹಾಗೂ ಅಭಿಷೇಕ್‌ ಶರ್ಮಾ 33 ಎಸೆತಗಳಲ್ಲಿ 60 ರನ್‌ ಸೇರಿಸಿತು. ಆದರೆ ತಲಾ 32 ರನ್‌ ಗಳಿಸಿ ಇಬ್ಬರೂ ಔಟಾದ ಬಳಿಕ ತಂಡದ ರನ್‌ ವೇಗ ಕುಸಿಯಿತು.

16 ಓವರಲ್ಲಿ 133 ರನ್ ಗಳಿಸಿದ್ದ ತಂಡಕ್ಕೆ ಕೊನೆ 4 ಓವರಲ್ಲಿ 76 ರನ್‌ ಬೇಕಿತ್ತು. ರಸೆಲ್‌ ಎಸೆದ 17ನೇ ಓವರಲ್ಲಿ ಕ್ಲಾಸೆನ್‌-ಶಾಬಾದ್‌ ಅಹ್ಮದ್‌ 16 ರನ್‌ ದೋಚಿದರೆ, ವರುಣ್‌ ಚಕ್ರವರ್ತಿಯ 18ನೇ ಓವರಲ್ಲಿ 21 ರನ್‌ ಮೂಡಿಬಂತು. 

ಮಿಚೆಲ್‌ ಸ್ಟಾರ್ಕ್‌ ಎಸೆದ 19ನೇ ಓವರಲ್ಲಿ 26 ರನ್‌ ಚಚ್ಚಿದ ತಂಡಕ್ಕೆ ಕೊನೆ ಓವರಲ್ಲಿ ಬೇಕಿದ್ದಿದು 13 ರನ್‌. ಆದರೆ ಹರ್ಷಿತ್ ರಾಣಾ ಮ್ಯಾಜಿಕ್‌ ಮಾಡಿದರು. ಕ್ಲಾಸೆನ್‌, ಶಾಬಾಜ್‌ ಇಬ್ಬರನ್ನೂ ಔಟ್‌ ಮಾಡಿದರು. 

ಕೊನೆ ಎಸೆತಕ್ಕೆ 5 ರನ್‌ ಬೇಕಿದ್ದಾಗ ಕಮಿನ್ಸ್‌ ಸಿಕ್ಸರ್‌ ಸಿಡಿಸಲು ವಿಫಲರಾದರೆ, ಕೆಕೆಆರ್‌ ಗೆಲುವಿನ ಸಂಭ್ರಮದಲ್ಲಿ ತೇಲಾಡಿತು.

ರಸೆಲ್‌ ಅಬ್ಬರ: ಇದಕ್ಕೂ ಮುನ್ನ ಕೆಕೆಆರ್‌ ರಸೆಲ್‌, ಸಾಲ್ಟ್‌ ಅಬ್ಬರದಿಂದಾಗಿ ಬೃಹತ್‌ ಮೊತ್ತ ಕಲೆಹಾಕಿತು. ಆರಂಭಿಕ ಸಾಲ್ಟ್‌ 50 ರನ್‌ ಸಿಡಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ರಸೆಲ್‌ 25 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್‌ನೊಂದಿಗೆ 64 ರನ್‌ ಚಚ್ಚಿದರು. ರಮನ್‌ದೀಪ್‌ 17 ಎಸೆತದಲ್ಲಿ 35, ರಿಂಕು 15 ಎಸೆತಗಳಲ್ಲಿ 23 ರನ್‌ ಕೊಡುಗೆ ನೀಡಿದರು.

ಸ್ಕೋರ್‌: ಕೋಲ್ಕತಾ 208/7(ರಸೆಲ್‌ 64, ಸಾಲ್ಟ್‌ 54, ನಟರಾಜನ್‌ 3-23), ಹೈದ್ರಾಬಾದ್‌ 204/7(ಕ್ಲಾಸೆನ್‌ 63, ಅಭಿಷೇಕ್‌ 32, ಹರ್ಷಿಕ್‌ 3-33)

06ನೇ ಬ್ಯಾಟರ್‌: ಐಪಿಎಲ್‌ನಲ್ಲಿ 200+ ಸಿಕ್ಸರ್‌ ಸಿಡಿಸಿದ 6ನೇ ಬ್ಯಾಟರ್‌ ಆ್ಯಂಡ್ರೆ ರಸೆಲ್‌.