ಸಾರಾಂಶ
ಪ್ಯಾರಿಸ್: ಚೊಚ್ಚಲ ಬಾರಿ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಗೆಲ್ಲುವ ಕಾತರದಲ್ಲಿರುವ ಎಲೆನಾ ರಬೈಕೆನಾ ಹಾಗೂ ಅರೈನಾ ಸಬಲೆಂಕಾ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಸೋಮವಾರ ನಡೆದ ಮಹಿಳಾ ಸಿಂಗಲ್ಸ್ 4ನೇ ಸುತ್ತಿನ ಪಂದ್ಯದಲ್ಲಿ 2022ರ ವಿಂಬಲ್ಡನ್ ವಿಜೇತ, ಕಜಕಸ್ತಾನದ ರಬೈಕೆನಾ ಅವರು 15ನೇ ಶ್ರೇಯಾಂಕಿತ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ 6-4, 6-3 ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದರು. 4ನೇ ಶ್ರೇಯಾಂಕಿತ ರಬೈಕೆನಾಗೆ ಕ್ವಾರ್ಟರ್‌ನಲ್ಲಿ ಇಟಲಿಯ ಜಾಸ್ಮೀನ್ ಸವಾಲು ಎದುರಾಗಲಿದೆ.ಕಳೆದೆರಡು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸಬಲೆಂಕಾ, 4ನೇ ಸುತ್ತಿನಲ್ಲಿ ಅಮೆರಿಕದ ಎಮ್ಮಾ ನವಾರೊ ವಿರುದ್ಧ 6-2, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 8ನೇ ಶ್ರೇಯಾಂಕಿತ, ಟ್ಯುನೀಶಿಯಾದ ಒನ್ಸ್ ಜಬುರ್ ಕೂಡಾ ಅಂತಿಮ 8ರ ಘಟ್ಟ ಪ್ರವೇಶಿಸಿದರು.
ಮೆಡ್ವೆಡೆವ್‌ಗೆ ಶಾಕ್: 2021ರ ಯುಎಸ್ ಓಪನ್ ಚಾಂಪಿಯನ್, 5ನೇ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್ ಪುರುಷರ ಸಿಂಗಲ್ಸ್ 4ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಡೇ ಮಿನಾರ್ ವಿರುದ್ಧ 6-4, 2-6, 1-6, 3-6 ಸೆಟ್‌ಗಳಲ್ಲಿ ಆಘಾತಕಾರಿ ಸೋಲುಂಡರು. ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ಇಟಲಿಯ ಜಾನಿಕ್ ಸಿನ್ನರ್ ಫ್ರಾನ್ಸ್‌ನ ಶ್ರೇಯಾಂಕ ರಹಿತ ಕೊರೆಂಟಿನ್‌ರನ್ನು 2-6, 6-3, 6-2, 6-1 ಸೆಟ್‌ಗಳಲ್ಲಿ ಸೋಲಿಸಿ ಕ್ವಾರ್ಟರ್ ಪ್ರವೇಶಿಸಿದರು.
ಬೋಪಣ್ಣ-ಎಬ್ಡೆನ್ ಕ್ವಾರ್ಟರ್‌ಗೆ
ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕರ್ನಾಟಕದ ರೋಹನ್ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸೋಮವಾರ 3ನೇ ಸುತ್ತಿನ ಪಂದ್ಯದಲ್ಲಿ ಭಾರತದ ಶ್ರೀರಾಮ್ ಬಾಲಾಜಿ-ಮೆಕ್ಸಿಕೋದ ವೆರೆಲಾ ಮಾರ್ಟಿನೆಜ್ ವಿರುದ್ಧ 6-7(2), 6-3, 7-6(10-8) ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಬೆಲ್ಜಿಯಂನ ಸ್ಯಾಂಡರ್ ಗಿಲ್ಲೆ-ಜೋರನ್ ವಿರುದ್ಧ ಸೆಣಸಾಡಲಿದ್ದಾರೆ. ಆದರೆ ಮಿಶ್ರ ಡಬಲ್ಸ್‌ನಲ್ಲಿ ರಷ್ಯಾದ ವೆರೋನಿಕಾ ಜೊತೆಗೂಡಿ ಕಣಕ್ಕಿಳಿದಿದ್ದ ಬೋಪಣ್ಣ, ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಲ್ಲಿ ಅಭಿಯಾನ ಕೊನೆಗೊಳಿಸಿದರು.