ಸಂಜು ಸ್ಯಾಮ್ಸನ್‌ ಅಬ್ಬರಕ್ಕೆ ಮಣಿದ ಲಖನೌ ಜೈಂಟ್ಸ್‌

| Published : Mar 25 2024, 12:45 AM IST / Updated: Mar 25 2024, 11:34 AM IST

ಸಾರಾಂಶ

ಲಖನೌ ವಿರುದ್ಧ ರಾಜಸ್ಥಾನಕ್ಕೆ 20 ರನ್‌ ಗೆಲುವು. ಸ್ಯಾಮ್ಸನ್‌ 82 ರನ್‌. ರಾಯಲ್ಸ್‌ 4 ವಿಕೆಟ್‌ಗೆ 193. ನಿಧಾನ ಆರಂಭಕ್ಕೆ ಬೆಲೆತೆತ್ತ ಲಖನೌ. 6 ವಿಕೆಟ್‌ಗೆ 173 ರನ್‌. ರಾಹುಲ್‌, ಪೂರನ್‌ ಹೋರಾಟ ವ್ಯರ್ಥ

ಜೈಪುರ: ಚೊಚ್ಚಲ ಆವೃತ್ತಿ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್ ಈ ಬಾರಿ ಐಪಿಎಲ್‌ನಲ್ಲಿ ಗೆಲುವಿನ ಆರಂಭ ಪಡೆದಿದೆ. ಅಬ್ಬರದ ಬ್ಯಾಟಿಂಗ್‌, ಶಿಸ್ತುಬದ್ಧ ಬೌಲಿಂಗ್‌ ನೆರವಿನಿಂದ ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನಕ್ಕೆ ಭಾನುವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ 20 ರನ್‌ ಗೆಲುವು ಲಭಿಸಿತು.

ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 4 ವಿಕೆಟ್‌ಗೆ 193 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ಲಖನೌಗೆ ರಾಜಸ್ಥಾನ ಬೌಲರ್‌ಗಳು ಮಾರಕವಾಗಿ ಪರಿಣಮಿಸಿದರು. ಆರಂಭದಲ್ಲೇ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡ 6 ವಿಕೆಟ್‌ಗೆ 173 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಡಿ ಕಾಕ್‌(04), ದೇವದತ್‌ ಪಡಿಕ್ಕಲ್(00), ಆಯುಶ್‌ ಬದೋನಿ(01) ಔಟಾದಾಗ ತಂಡದ ಮೊತ್ತ ಕೇವಲ 11. ದೀಪಕ್‌ ಹೂಡಾ(13 ಎಸೆತದಲ್ಲಿ 26) ಕೆಲ ಹೊತ್ತು ಹೋರಾಡಿದರೂ 26ಕ್ಕೆ ಇನ್ನಿಂಗ್ಸ್‌ ಕೊನೆಗೊಳಿಸಿದರು. 

5ನೇ ವಿಕೆಟ್‌ಗೆ ರಾಹುಲ್‌-ಪೂರನ್ 52 ಎಸೆತದಲ್ಲಿ 85 ರನ್‌ ಸೇರಿಸಿದರೂ ತಂಡಕ್ಕೆ ಸಾಕಾಗಲಿಲ್ಲ. ರಾಹುಲ್‌ 58 ರನ್‌ ಗಳಿಸಿ ನಿರ್ಣಾಯಕ ಹಂತದಲ್ಲಿ ಔಟಾದರೆ, ಪೂರನ್‌ 64 ರನ್ ಸಿಡಿಸಿ ಅಜೇಯವಾಗಿ ಉಳಿದರು.

ಸ್ಯಾಮ್ಸನ್‌ ಅಬ್ಬರ: ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ರಾಯಲ್ಸ್‌ ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟಿತು. ಆದರೆ ಜೈಸ್ವಾಲ್‌ 24, ಬಟ್ಲರ್‌ 11ಕ್ಕೆ ಔಟಾದರು. 

ಈ ವೇಳೆ ಸಂಜುಗೆ ಜೊತೆಯಾದ ರಿಯಾನ್‌ ಪರಾಗ್‌ 43 ರನ್‌ ಗಳಿಸಿದರೆ, ಕೊನೆವರೆಗೂ ಲಖನೌ ಬೌಲರ್‌ಗಳನ್ನು ಚೆಂಡಾಡಿದ ಸಂಜು 52 ಎಸೆತದಲ್ಲಿ ಔಟಾಗದೆ 82 ರನ್‌ ಸಿಡಿಸಿದರು. ಧ್ರುವ್‌ ಜುರೆಲ್‌ 20 ರನ್‌ ಕೊಡುಗೆ ನೀಡಿದರು.

ಸ್ಕೋರ್‌: ರಾಜಸ್ಥಾನ 193/4(ಸ್ಯಾಮ್ಸನ್‌ 82, ರಿಯಾನ್‌ 43, ನವೀನ್‌ 2-41), ಲಖನೌ 173/6(ಪೂರನ್‌ 64*, ರಾಹುಲ್‌ 58, ಬೌಲ್ಟ್‌ 2-35)

ಸ್ಪೈಡರ್‌ ಕ್ಯಾಮ್‌ ಕೇಬಲ್‌ ತುಂಡಾಗಿ ಪಂದ್ಯ ಸ್ಥಗಿತ!

ರಾಜಸ್ಥಾನ ಬ್ಯಾಟಿಂಗ್‌ ಆರಂಭಿಸಿದಾಗ ಮೈದಾನದ ಸ್ಪೈಡರ್‌ ಕ್ಯಾಮ್‌ನ ಕೇಬಲ್‌ ತುಂಡಾಗಿ ಮೈದಾನಕ್ಕೆ ಬಿತ್ತು. ಹೀಗಾಗಿ 7 ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಂಡಿತ್ತು.