ಸಾರಾಂಶ
ಕರಾಚಿ: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜೊತೆ ವಿಚ್ಛೇದನ ಸುದ್ದಿ ಹರಿದಾಡುತ್ತಿರುವ ನಡುವೆಯೇ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಬೇರೊಂದು ಮದುವೆಯಾಗಿದ್ದಾರೆ.
ಪಾಕಿಸ್ತಾನದ ಖ್ಯಾತ ನಟಿ ಸನಾ ಜಾವೆದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾಗಿ ಮಲಿಕ್ ಸಾಮಾಜಿಕ ತಾಣ ಮೂಲಕ ಪ್ರಕಟಿಸಿದ್ದಾರೆ.
ಸಾನಿಯಾ ಹಾಗೂ ಮಲಿಕ್ 2010ರಲ್ಲಿ ಹೈದರಾಬಾದ್‌ನಲ್ಲಿ ವಿವಾಹವಾಗಿದ್ದು, ದಂಪತಿಗೆ 5 ವರ್ಷದ ಮಗನಿದ್ದಾರೆ.
2022ರಿಂದಲೂ ಸಾನಿಯಾ-ಮಲಿಕ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದಾಗಿ ಊಹಾಪೋಹ ಹರಿದಾಡುತ್ತಿದೆ.
ಆದರೆ ಈ ವರೆಗೆ ಇಬ್ಬರೂ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಘೋಷಿಸಿಲ್ಲ. ಈ ನಡುವೆ ಮಲಿಕ್ 2ನೇ ವಿವಾಹವಾಗಿದ್ದಾರೆ.
ಇದರ ಬೆನ್ನಲ್ಲೇ ಸಾನಿಯಾರ ತಂದೆ ಇಮ್ರಾನ್ ಪ್ರತಿಕ್ರಿಯೆ ನೀಡಿದ್ದು, ಮಲಿಕ್‌ಗೆ ಸಾನಿಯಾ ವಿಚ್ಛೇದನ ನೀಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ನಟಿ ಸನಾಗೂ ಇದು 2ನೇ ಮದುವೆ. ಈ ಮೊದಲು 2020ರಲ್ಲಿ ಗಾಯಕ ಉಮೈರ್ ಜಸ್ವಾಲ್ ಜೊತೆ ಮದುವೆಯಾಗಿದ್ದ ಸನಾ, ಕಳೆದ ವರ್ಷ ದೂರವಾಗಿದ್ದರು.