ಸಾತ್ವಿಕ್‌-ಚಿರಾಗ್‌ಗೆ ಥಾಯ್ಲೆಂಡ್‌ ಓಪನ್‌ ಕಿರೀಟ

| Published : May 20 2024, 01:39 AM IST / Updated: May 20 2024, 04:32 AM IST

ಸಾರಾಂಶ

ಟೂರ್ನಿಯಲ್ಲಿ ಒಂದೂ ಗೇಮ್‌ ಸೋಲದೆ ಪ್ರಶಸ್ತಿ ಎತ್ತಿಹಿಡಿದ ಭಾರತೀಯ ಜೋಡಿ, ಒಟ್ಟಾರೆ 9ನೇ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಬ್ಯಾಂಕಾಕ್‌: ಭಾರತದ ತಾರಾ ಪುರುಷ ಡಬಲ್ಸ್‌ ಜೋಡಿ ಸಾತ್ವಿಕ್‌-ಚಿರಾಗ್‌ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 

ಇದು ವಿಶ್ವ ನಂ.3 ಜೋಡಿಗೆ ಈ ಆವೃತ್ತಿಯಲ್ಲಿ ಲಭಿಸಿದ 2ನೇ ಪ್ರಶಸ್ತಿ.ಭಾನುವಾರ ಇಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಸಾತ್ವಿಕ್‌-ಚಿರಾಗ್‌ ಅವರು, ವಿಶ್ವ ನಂ.29, ಚೀನಾದ ಚೆನ್‌ ಬೊ ಯಂಗ್‌-ಲು ಯಿ ವಿರುದ್ಧ 21-15, 21-15ರಲ್ಲಿ ಗೆಲುವು ಸಾಧಿಸಿದರು. 

ಟೂರ್ನಿಯಲ್ಲಿ ಒಂದೂ ಗೇಮ್‌ ಸೋಲದೆ ಪ್ರಶಸ್ತಿ ಎತ್ತಿಹಿಡಿದ ಭಾರತೀಯ ಜೋಡಿ, ಒಟ್ಟಾರೆ 9ನೇ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇತ್ತೀಚೆಗೆ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. 2024ರಲ್ಲೇ ಮಲೇಷ್ಯಾ ಓಪನ್‌, ಇಂಡಿಯಾ ಓಪನ್‌ನಲ್ಲಿ ಈ ಜೋಡಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌: 2 ಪದಕ ಗೆದ್ದ ಭಾರತ

ಕೋಬೆ(ಜಪಾನ್‌: ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ 2 ಪದಕಗಳನ್ನು ಗೆದ್ದಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ ಬೆಳ್ಳಿ ವಿಜೇತ ನಿಶಾದ್‌ ಕುಮಾರ್‌, ಪುರುಷರ ಹೈ ಜಂಪ್‌ ಸ್ಪರ್ಧೆಯಲ್ಲಿ 1.99 ಮೀ. ಎತ್ತರಕ್ಕೆ ನೆಗೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 

ಮಹಿಳೆಯರ 200 ಮೀ. ಸ್ಪರ್ಧೆಯಲ್ಲಿ ಪ್ರೀತಿ ಪಾಲ್‌ 30.49 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇದಕ್ಕೂ ಮುನ್ನ ಶನಿವಾರ ಕರ್ನಾಟಕದ ರಕ್ಷಿತಾ ರಾಜುಗೆ 1500 ಮೀ. ಓಟದಲ್ಲಿ 5ನೇ ಸ್ಥಾನಿಯಾಗಿದ್ದರು. ಕೂಟ ಮೇ 25ರ ವರೆಗೂ ನಡೆಯಲಿದೆ.