ರಾಜ್ಯದ ಕ್ರೀಡಾಳುಗಳಿಗೆ ಶಾಲಾ ಪರೀಕ್ಷೆಯಲ್ಲಿ 10 ಕೃಪಾಂಕ? : ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Nov 15 2024, 12:33 AM IST / Updated: Nov 15 2024, 04:13 AM IST

ಸಾರಾಂಶ

ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ಸ್‌ಗೆ ಚಾಲನೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

 ಬೆಂಗಳೂರು : ಮಕ್ಕಳ ಜೀವನದಲ್ಲಿ ಓದಿನ ಜೊತೆ ಕ್ರೀಡೆಯೂ ಬಹಳ ಮುಖ್ಯ. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಹೆಚ್ಚಲಿದೆ. ರಾಜ್ಯದ ಮಕ್ಕಳಲ್ಲಿ ಕ್ರೀಡೆಯತ್ತ ಆಸಕ್ತಿ ಹೆಚ್ಚಿಸಲು ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದು, ಕ್ರೀಡೆಯಲ್ಲಿ ಸಕ್ರಿಯರಾಗಿರುವ ಮಕ್ಕಳಿಗೆ ಶಾಲಾ ಪರೀಕ್ಷೆಗಳಲ್ಲಿ 10 ಕೃಪಾಂಕಗಳನ್ನು ನೀಡುವ ಬಗ್ಗೆ ಪ್ರಸ್ತಾಪವಿದೆ. ಈ ಬಗ್ಗೆ ಗಂಭೀರ ಪರಿಶೀಲನೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗುರುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 3ನೇ ಆವೃತ್ತಿಯ ರಾಜ್ಯ ಅಂಡರ್‌-14 ವಿಭಾಗದ ಮಿನಿ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ (ಕೆಒಎ) ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ವೇದಿಕೆಯಲ್ಲೇ ಕ್ರೀಡಾಪಟುಗಳಿಗೆ ಪರೀಕ್ಷೆಯಲ್ಲಿ ಗ್ರೇಸ್‌ ಮಾರ್ಕ್ಸ್‌ (ಕೃಪಾಂಕ) ನೀಡುವಂತೆ ಮನವಿ ಮಾಡಿದರು.

ಬಳಿಕ ಸಿಎಂ ಭಾಷಣ ಮಾಡುವ ವೇಳೆ ಮತ್ತೊಮ್ಮೆ ಅವರ ಗಮನ ಸೆಳೆದ ಗೋವಿಂದರಾಜು ಅವರು ಕೃಪಾಂಕದ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಈ ಬಗ್ಗೆ ಈಗಲೇ ಘೋಷಣೆ ಮಾಡುವುದಿಲ್ಲ. ಇಲಾಖೆಯ ಅಧಿಕಾರಿಗಳು, ತಜ್ಞರ ಜೊತೆ ಚರ್ಚೆ ನಡೆಸುತ್ತೇನೆ. ಈ ವಿಚಾರವನ್ನು ಗಂಭೀರವಾಗಿ ಪರಿಶೀಲಿಸುತ್ತೇನೆ’ ಎಂದು ಭರವಸೆ ನೀಡಿದರು. ಸಿಎಂರ ಈ ಮಾತು, ನೆರೆದಿದ್ದ ಸಾವಿರಾರು ಮಕ್ಕಳು ಖುಷಿ ಪಡುವಂತೆ ಮಾಡಿತು.

ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರಾದ ರಾಮಲಿಂಗ ರೆಡ್ಡಿ, ಕೆ.ಜೆ.ಜಾರ್ಜ್‌, ಕೆಒಎ ಅಧ್ಯಕ್ಷ ಡಾ. ಕೆ.ಗೋವಿಂದರಾಜು, ಶಾಸಕ ರಿಜ್ವಾನ್‌ ಅರ್ಷದ್‌, ಭಾರತದ ಮಾಜಿ ಅಥ್ಲೀಟ್‌, ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌ನ ಉಪಾಧ್ಯಕ್ಷೆ ಅಂಜು ಬಾಬಿ ಜಾರ್ಜ್‌, ಕೆಒಎ ಪ್ರಧಾನ ಕಾರ್ಯದರ್ಶಿ ಅನಂತರಾಜು, ರಾಜ್ಯದ ವಿವಿಧ ಕ್ರೀಡಾ ಫೆಡರೇಶನ್‌ಗಳ ಪದಾಧಿಕಾರಿಗಳು, ಸಾವಿರಾರು ಯುವ ಕ್ರೀಡಾಪಟುಗಳು ಇದ್ದರು. ‘ನಾನೂ ಕಬಡ್ಡಿ, ಕುಸ್ತಿ ಆಡ್ತಿದ್ದೆ,

ಮನೇಲಿ ಪ್ರೋತ್ಸಾಹ ಸಿಗಲಿಲ್ಲ’

ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ತಮ್ಮ ಬಾಲ್ಯದ ದಿನಗಳನ್ನು ನೆನೆಪು ಮಾಡಿಕೊಂಡ ಸಿಎಂ, ‘ಶಾಲಾ ದಿನಗಳಲ್ಲಿ ನಾನೂ ಕಬಡ್ಡಿ, ಕುಸ್ತಿ ಆಡುತ್ತಿದ್ದೆ. ಆದರೆ ನಮ್ಮ ತಂದೆಗೆ ವಿಚಾರ ಗೊತ್ತಾದಾಗ ಓದಿನ ಕಡೆಗೆ ಗಮನ ಕಡಿಮೆಯಾಗಬಹುದು ಎಂದು ನನ್ನನ್ನು ಕ್ರೀಡೆಯಿಂದ ದೂರವಿರಿಸಿದರು. ನನಗೆ ಪೋಷಕರಿಂದ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ’ ಎಂದರು.

‘ನಮ್ಮ ಸರ್ಕಾರ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುತ್ತಿದೆ. ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಅತ್ಯುತ್ತಮ ವಾತಾವರಣವಿದೆ. ನಮ್ಮ ರಾಜ್ಯದ ಕ್ರೀಡಾ ಪ್ರತಿಭೆಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರಳಬೇಕು. ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲರಿಗೂ ನನ್ನ ಶುಭಾಶಯಗಳು’ ಎಂದು ಸಿಎಂ ತಮ್ಮ ಭಾಷಣ ಮುಗಿಸಿದರು.

ಕ್ರಾಸ್‌ ಕಂಟ್ರಿ ಓಡ್ತಿದ್ದೆ, ಜಾವೆಲಿನ್‌ ಎಸೆಯುತ್ತಿದ್ದೆ : ಡಿಸಿಎಂ ಡಿಕೆಶಿ!

ಕ್ರೀಡಾಪಟುಗಳನ್ನು ಹುರಿದುಂಬಿಸಲು ತಮ್ಮ ಶಾಲಾ ದಿನಗಳನ್ನು ಕ್ರೀಡಾ ನೆನಪುಗಳನ್ನು ಮೆಲುಕು ಹಾಕಿದ ಡಿಸಿಎಂ ಡಿ.ಕೆ.ಶಿವಕುಮಾರ್‌, ‘ನಿಮ್ಮಂತೆ ನಾನೂ ಶಾಲೆಗೆ ಹೋಗುವಾಗ ಕ್ರಾಸ್‌ ಕಂಟ್ರಿ ಓಟದಲ್ಲಿ ಪಾಲ್ಗೊಳ್ಳುತ್ತಿದೆ. ಜಾವೆಲಿನ್‌ ಎಸೆಯುತ್ತಿದ್ದೆ, ವಾಲಿಬಾಲ್‌ ಆಡುತ್ತಿದ್ದೆ’ ಎಂದರು.