ಕಳೆದ ಭಾನುವಾರ ಲಂಡನ್ ಮ್ಯಾರಥಾನ್‌ನಲ್ಲಿ ಜಗತ್ತು ಈ ಹಿಂದೆ ಕಂಡು ಕೇಳರಿಯದ ಸಾಧನೆಯೊಂದು ದಾಖಲಾಯಿತು. ಇದು ಅಂತಿಂಥ ಸಾಧನೆ ಅಲ್ಲ. ಮಾನವನ ದೇಹ ರಚನೆ ಮಾಡಿದ ಆ ದೇವರಿಗೂ ಒಂದು ನಿಮಿಷ ಅಚ್ಚರಿಯಾಗಿರಬಹುದು. ಅಂಥ ಸಾಧನೆ ಅದು
- ಸ್ಪಂದನ್ ಕಣಿಯಾರ್
ಕಳೆದ ಭಾನುವಾರ ಲಂಡನ್ ಮ್ಯಾರಥಾನ್‌ನಲ್ಲಿ ಜಗತ್ತು ಈ ಹಿಂದೆ ಕಂಡು ಕೇಳರಿಯದ ಸಾಧನೆಯೊಂದು ದಾಖಲಾಯಿತು. ಇದು ಅಂತಿಂಥ ಸಾಧನೆ ಅಲ್ಲ. ಮಾನವನ ದೇಹ ರಚನೆ ಮಾಡಿದ ಆ ದೇವರಿಗೂ ಒಂದು ನಿಮಿಷ ಅಚ್ಚರಿಯಾಗಿರಬಹುದು. ಅಂಥ ಸಾಧನೆ ಅದು. ಕೀನ್ಯಾದ ಸಬಾಸ್ಟಿಯನ್ ಸಾವೆ, 42.195 ಕಿಲೋ ಮೀಟರ್ (ಮ್ಯಾರಥಾನ್ ಓಟದ ದೂರ) ಅನ್ನು ಎರಡು ಗಂಟೆಗಳೊಳಗೆ ಓಡಿ, ಜಗತ್ತನ್ನೇ ಬೆರಗಾಗಿಸಿದರು. 1 ಗಂಟೆ 59 ನಿಮಿಷ 30 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದ ಸಾವೆಯನ್ನು ಕೊಂಡಾಡದ ಕ್ರೀಡಾಪಟುವಿಲ್ಲ. ಕೇವಲ ದೂರಗಾಮಿ ಓಟಗಾರರು ಮಾತ್ರವಲ್ಲದೇ, ಕ್ರಿಕೆಟಿಗರಿಂದ ಹಿಡಿದು ಟೆನಿಸ್, ಬ್ಯಾಡ್ಮಿಂಟನ್ ತಾರೆಯರವರೆಗೂ ಸಾವೆ ಸಾಧನೆಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಎದ್ದು ನಿಂತು ಸಲ್ಯೂಟ್ ಹೊಡೆದಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಸಾಧನೆ
ಮೊದಲನೆಯದ್ದು, ಈವರೆಗೂ ಯಾರೂ ಅಧಿಕೃತವಾಗಿ 2 ಗಂಟೆಗಳೊಳಗೆ ಮ್ಯಾರಥಾನ್ ಓಟ ಪೂರೈಸಿರಲಿಲ್ಲ. ಎರಡನೇಯದ್ದು, ಸಾಮಾನ್ಯ ಕ್ರೀಡಾಪಟು ಒಬ್ಬ ದಿಗ್ಗಜನಾಗಿ ಬೆಳೆಯಬೇಕಿದ್ದರೆ ಏನೆಲ್ಲಾ ಗುಣಗಳನ್ನು ಹೊಂದಿರಬೇಕೋ ಅವೆಲ್ಲವೂ ಸಾವೆಯಲ್ಲಿ ಕಂಡುಬಂತು.
ಏಕಾಗ್ರತೆ, ತಾಳ್ಮೆ, ಛಲ, ಬದ್ಧತೆ, ನಮ್ಯತೆ, ಪರಿಶ್ರಮ, ಚುರುಕುತನ, ಸ್ಥಿರತೆ, ತ್ರಾಣ, ನೀವು ಏನೇನು ಪಟ್ಟಿ ಮಾಡಲು ಸಾಧ್ಯವೋ ಅದೆಲ್ಲವನ್ನೂ ಸಾವೆಯ ಈ ಸಾಧನೆ ಹಿಂದೆ ಕಾಣಬಹುದು.
ಸಾವೆ ರೀತಿ ನೀವೂ ಓಡಲು ಸಾಧ್ಯವೆ?!
1. ಸಾವೆ ಪ್ರತಿ ನಿಮಿಷಕ್ಕೆ ಸರಾಸರಿ 2.49 ಕಿ.ಮೀ. ಕ್ರಮಿಸಿದರು. ಈ ರೀತಿ ನಿರಂತರವಾಗಿ 2 ಗಂಟೆ ಓಡಿದ್ದು ಅಸಾಧಾರಣ, ಅಸಾಮಾನ್ಯ, ಇನ್ನೂ ಏನೇನೆಂದು ಕರೆಯಲು ಸಾಧ್ಯವೋ ಅದೆಲ್ಲವೂ ಹೌದು.
2. ಸಾವೆಯ ಸಾಧನೆ ಎಷ್ಟು ದೊಡ್ಡದು ಎಂದು ನಿಮಗೆ ನಿಜವಾದ ಐಡಿಯಾ ಸಿಗಬೇಕಿದ್ದರೆ, ಒಂದು ಕೆಲಸ ಮಾಡಿ. ನಿಮ್ಮ ಮನೆ/ಅಪಾರ್ಟ್‌ಮೆಂಟ್ ಅಥವಾ ನೀವು ಹೋಗುವ ಜಿಮ್‌ನಲ್ಲಿರುವ ಥ್ರೆಡ್‌ಮಿಲ್ ಇದ್ದರೆ ಅದರಲ್ಲಿ ಪ್ರತಿ ಗಂಟೆಗೆ 13.16 ಮೈಲಿ (ಗಂಟೆಗೆ 21.18 ಕಿ.ಮೀ.) ಸ್ಪೀಡ್ ಸೆಟ್ ಮಾಡಿ. ಬಹುತೇಕ ಥ್ರೆಡ್‌ಮಿಲ್‌ಗಳ ಗರಿಷ್ಠ ಮಿತಿಯೇ ಗಂಟೆಗೆ 12 ಮೈಲಿ. ಈ ಸ್ಪೀಡ್‌ನಲ್ಲಿ ನೀವು 30-90 ಸೆಕೆಂಡ್ ಓಡಿದರೆ ಅದೇ ದೊಡ್ಡ ಸಾಧನೆ. ಅಂತಹದ್ದರಲ್ಲಿ ಸಾವೆ ನಿರಂತರವಾಗಿ 7170 ಸೆಕೆಂಡ್ ಓಡಿದ್ದಾರೆ.
3. ನೀವು 400 ಮೀ. ಓಟದಲ್ಲಿ ಪಾಲ್ಗೊಂಡಿದ್ದೀರಿ ಅಂದುಕೊಳ್ಳಿ. ಉತ್ತಮ ಫಿಟ್ನೆಸ್ ಹೊಂದಿರುವ ವ್ಯಕ್ತಿಗೆ 400 ಮೀ. ಓಡಲು ಸರಾಸರಿ 51ರಿಂದ 60 ಸೆಕೆಂಡ್ ಬೇಕಾಗುತ್ತದೆ. ಸಾವೆ ಪ್ರತಿ 400 ಮೀ. ಲ್ಯಾಪ್ ಓಡಲು ಸರಾಸರಿ 68.2 ಸೆಕೆಂಡ್ ತೆಗೆದುಕೊಂಡರು. ಅಂದರೆ ಯಾವುದೇ ವಿರಾಮವಿಲ್ಲದೆ, 105.5 ಲ್ಯಾಪ್ ಓಡಿದರು.
4. ಸಾವೆ ಓಡುತ್ತಿದ್ದ ವೇಗಕ್ಕೆ ಅನುಗುಣವಾಗಿ ಅವರ ಹೃದಯ ಎಷ್ಟು ರಕ್ತ ಹರಿಸುತ್ತಿರಬಹುದು ಎನ್ನುವ ಕುತೂಹಲ ನಿಮಗಿದೆಯೇ? ಸಾವೆ ಓಡುತ್ತಿದ್ದ ತೀವ್ರತೆಗೆ ತಕ್ಕಂತೆ, ಸಾಮಾನ್ಯವಾಗಿ ಹೃದಯ ಪ್ರತಿ ನಿಮಿಷಕ್ಕೆ 30ರಿಂದ 35 ಲೀಟರ್ ರಕ್ತ ಹರಿಸಬೇಕು. ಅಂದರೆ 2 ಗಂಟೆಗಳಲ್ಲಿ ಸಾವೆಯ ದೇಹದಲ್ಲಿ ಬರೋಬ್ಬರಿ 4000 ಲೀ. ರಕ್ತ ಹರಿದಿದೆ.
1 ವರ್ಷದಲ್ಲಿ ಡೋಪಿಂಗ್
ಪರೀಕ್ಷೆಗೆ ₹47 ಲಕ್ಷ ಖರ್ಚು!
ಸಾವೆಗೆ ಪ್ರತಿಷ್ಠಿತ ಕ್ರೀಡಾ ಪರಿಕರಗಳ ತಯಾರಕ ಸಂಸ್ಥೆಯಾದ ಆ್ಯಡಿಡಾಸ್ ಪ್ರಾಯೋಜಕತ್ವ ನೀಡುತ್ತದೆ. ಮ್ಯಾರಥಾನ್ ಓಡಲು ಬೇಕಿರುವ ಸಿದ್ಧತೆಯೇ ಒಂದು ಮ್ಯಾರಥಾನ್ ಇದ್ದಂತೆ. ಅದರಲ್ಲೂ ಪ್ರಮುಖವಾಗಿ, ಉದ್ದೀಪನ ಮದ್ದು ಸೇವನೆಯಿಂದ ದೂರವಿರುವುದು ಬಹುದೊಡ್ಡ ಸವಾಲು. ಇದಕ್ಕಾಗಿ ಆ್ಯಡಿಡಾಸ್ ಕಳೆದುಕೊಂಡು ವರ್ಷದಲ್ಲಿ ಬರೋಬ್ಬರಿ 50000 ಅಮೆರಿಕನ್ ಡಾಲರ್ (ಅಂದಾಜು ₹47 ಲಕ್ಷ) ಹಣವನ್ನು ಕೇವಲ ಸಾವೆಯ ಡೋಪಿಂಗ್ ಪರೀಕ್ಷೆಗೆ ಖರ್ಚು ಮಾಡಿದೆ. ಪ್ರತಿ ವಾರ 2ರಿಂದ 3 ಬಾರಿ ಸಾವೆ ರಕ್ತ ಹಾಗೂ ಮೂತ್ರ ಪರೀಕ್ಷೆಗೆ ಒಳಗಾಗಿದ್ದಾರೆ. ತಾವು ಸೇವಿಸುವ ಪ್ರತಿ ಆಹಾರ, ಪಾನೀಯ, ಔಷಧದ ಮೇಲೂ ತೀವ್ರ ನಿಗಾ ಇಡುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ.
ತಿಂಗಳಿಗೆ 800 ಕಿ.ಮೀ ಓಡುವ ಸಾವೆ!
ಆಫ್ರಿಕಾದ ಕ್ರೀಡಾಪಟುಗಳಿಗೆ ಓಟವೇ ಜೀವನ. ಆದರೂ ವಿಶ್ವಶ್ರೇಷ್ಠ ಓಟಗಾರರಾಗಲು ಅಪ್ರತಿಮ ಪರಿಶ್ರಮ ಅಗತ್ಯ. ಸಬಾಸ್ಟಿಯನ್ ಸಾವೆ, ಪ್ರತಿನಿತ್ಯ 6ರಿಂದ 8 ಗಂಟೆ ಅಭ್ಯಾಸ ನಡೆಸುತ್ತಾರೆ. ಸಾವೆಯಂತಹ ಅಥ್ಲೀಟ್‌ಗಳ ಅಭ್ಯಾಸದಲ್ಲಿ ಜಿಮ್, ಊಟ, ನಿದ್ರೆ ಎಲ್ಲದ್ದಕ್ಕೂ ಹೆಚ್ಚಿನ ಮಹತ್ವವಿರಲಿದೆ. ಎಲ್ಲದ್ದಕ್ಕೂ ನಿರ್ದಿಷ್ಟ ಲೆಕ್ಕವಿದೆ. ದಿನಕ್ಕೆ ಇಷ್ಟು ಗಂಟೆ ಜಿಮ್, ಇಷ್ಟು ಪ್ರಮಾಣದ ಆಹಾರ, ಇಷ್ಟು ಗಂಟೆಗಳ ನಿದ್ದೆ. ಒಂದು ಲೆಕ್ಕದಲ್ಲಿ ಸಾವೆ ದಿನದ 24 ಗಂಟೆಯೂ ಮ್ಯಾರಥಾನ್ ಓಟಕ್ಕಾಗಿನ ಸಿದ್ಧತೆಯಲ್ಲೇ ಇರುತ್ತಾರೆ.
ಒಂದು ಅಂದಾಜಿನ ಪ್ರಕಾರ, ಸಾವೆ ಪ್ರತಿ ತಿಂಗಳು 800 ಕಿ.ಮೀ. ಓಡುತ್ತಾರೆ. ಸಿಂಪಲ್ ಆಗಿ ಹೇಳುವುದಾದರೆ ಬೆಂಗಳೂರಿಂದ ಮಂಗಳೂರಿಗೆ ಓಡಿ ಹೋಗಿ ವಾಪಸ್ ಬೆಂಗಳೂರಿಗೆ ಬಂದಷ್ಟು ದೂರ.
ಮ್ಯಾರಥಾನ್ ಓಟಗಾರರು ತಮ್ಮ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಮುದ್ರ ಮಟ್ಟಕ್ಕಿಂತ ಬಹಳ ಎತ್ತರವಿರುವ ಪ್ರದೇಶಗಳಲ್ಲಿ ಅಭ್ಯಾಸ ನಡೆಸುತ್ತಾರೆ. ಅಲ್ಲಿ ಆಮ್ಲಜನಕ ಪ್ರಮಾಣ ಕಡಿಮೆ ಇರುವುದರಿಂದ, ಶ್ವಾಸಕೋಶದ ಸಾಮರ್ಥ್ಯ ಹೆಚ್ಚಲಿದೆ. ಇದರಿಂದ ಓಟದ ವೇಳೆ ತಮ್ಮ ಉಸಿರಾಟದ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗಲಿದೆ.
ಧರಿಸಿದ್ದ ಶೂ ತೂಕ ಬರೀ 97 ಗ್ರಾಂ!
- ವಿಶ್ವ ದಾಖಲೆ ಬರೆದ ಶೂ ಬೆಲೆ ₹47000
ಸಾವೆ ಲಂಡನ್ ಮ್ಯಾರಥಾನ್‌ನಲ್ಲಿ ಆ್ಯಡಿಡಾಸ್ ಸಂಸ್ಥೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿರುವ ‘ಆ್ಯಡಿಝೀರೋ ಆ್ಯಡಿಯೊಸ್ ಪ್ರೊ ಇವೊ 3’ ಶೂ ಧರಿಸಿದ್ದರು. ಈ ಶೂನ ತೂಕ ಕೇವಲ 97 ಗ್ರಾಂ. ಇದರ ಬೆಲೆ 500 ಅಮೆರಿಕನ್ ಡಾಲರ್ (ಅಂದಾಜು 47125 ರು.). ಸೋಮವಾರವಷ್ಟೇ ಆ್ಯಡಿಡಾಸ್ ಈ ಶೂ ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ.
2 ಗಂಟೆಯೊಳಗೆ ಓಟ ಮುಗಿಯಲು
ಬೇಕಾಯ್ತು ಬರೋಬ್ಬರಿ 118 ವರ್ಷ!
ಮ್ಯಾರಥಾನ್ ಓಟವನ್ನು ಮೊದಲ ಬಾರಿಗೆ 3 ಗಂಟೆಗಳ ಒಳಗೆ ಮುಗಿಸಿದ ಸಾಧನೆ ದಾಖಲಾಗಿದ್ದು 1908ರ ಲಂಡನ್ ಒಲಿಂಪಿಕ್ಸ್‌ನಲ್ಲಿ. ಅಮೆರಿಕದ ಜಾನಿ ಹೇಯ್ಸ್ 2 ಗಂಟೆ 55 ನಿಮಿಷ 18 ಸೆಕೆಂಡ್ ತೆಗೆದುಕೊಂಡಿದ್ದರು. ಇದು ಎರಡೂವರೆ ಗಂಟೆಯೊಳಗೆ ಬರಲು 27 ವರ್ಷ ಬೇಕಾಯಿತು. 1935ರಲ್ಲಿ ಕೊರಿಯಾದ ಸೊನ್ ಕಿ ಚುಂಗ್ ಟೋಕಿಯೋದಲ್ಲಿ 2 ಗಂಟೆ 26 ನಿಮಿಷ 14 ಸೆಕೆಂಡ್‌ಗಳಲ್ಲಿ 42.195 ಕಿ.ಮೀ. ಪೂರೈಸಿದ್ದರು. ವ್ಯಕ್ತಿಯೊಬ್ಬ 2 ಗಂಟೆಗಳೊಳಗೆ ಮ್ಯಾರಥಾನ್ ಓಟ ಪೂರ್ತಿ ಮಾಡಲು 2026ರ ವರೆಗೂ ಕಾಯಬೇಕಾಯಿತು. ಅಂದರೆ ಅಂದಾಜು 26-27 ನಿಮಿಷ ಇಳಿಯಲು 90 ವರ್ಷಕ್ಕೂ ಹೆಚ್ಚು ಸಮಯ ಬೇಕಾಯಿತು.
- ಮಾನವನ ದೇಹ ರಚನೆಯ ಸಾರ್ಮರ್ಥ್ಯಕ್ಕೇ ಕೀನ್ಯಾದ ಸಾವೆ ಸವಾಲ್
1:59.30 (ಟೈಮರ್ ಬಳಸಿ)
42.195 ಕಿ.ಮೀ. ಓಟ
