ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಏಷ್ಯನ್‌ ದಾಖಲೆ ಜತೆ ಬಂಗಾರ ಗೆದ್ದ ಪ್ರವೀಣ್‌ : ಭಾರತಕ್ಕೆ 6ನೇ ಚಿನ್ನದ ಪದಕ

| Published : Sep 07 2024, 01:34 AM IST / Updated: Sep 07 2024, 03:56 AM IST

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಏಷ್ಯನ್‌ ದಾಖಲೆ ಜತೆ ಬಂಗಾರ ಗೆದ್ದ ಪ್ರವೀಣ್‌ : ಭಾರತಕ್ಕೆ 6ನೇ ಚಿನ್ನದ ಪದಕ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತಕ್ಕೆ 6ನೇ ಚಿನ್ನದ ಪದಕ. ಪುರುಷರ ಹೈಜಂಪ್‌ ಟಿ64 ವಿಭಾಗದಲ್ಲಿ ಸ್ವರ್ಣ ಗೆದ್ದ ಪ್ರವೀಣ್‌ ಕುಮಾರ್‌. 2.08 ಮೀ. ಎತ್ತರಕ್ಕೆ ಜಿಗಿದು ಏಷ್ಯಾ ದಾಖಲೆ. ಭಾರತದ ಪದಕ ಗಳಿಕೆ 26ಕ್ಕೆ ಏರಿಕೆ. ಅಥ್ಲೆಟಿಕ್ಸ್‌ನಲ್ಲೇ ಈ ಬಾರಿ ಭಾರತಕ್ಕೆ 14 ಮೆಡಲ್‌

ಪ್ಯಾರಿಸ್‌: 17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕ ಗಳಿಕೆಯ ನಾಗಾಲೋಟ ಮುಂದುವರಿದಿದೆ. ಶುಕ್ರವಾರ ದೇಶದ ಪದಕ ಖಾತೆಗೆ ಮತ್ತೊಂದು ಪದಕ ಸೇರ್ಪಡೆಗೊಂಡಿತು. ಪುರುಷರ ಹೈಜಂಪ್‌ ಟಿ64 ವಿಭಾಗದಲ್ಲಿ ಪ್ರವೀಣ್‌ ಕುಮಾರ್‌ ಏಷ್ಯಾ ದಾಖಲೆಯೊಂದಿಗೆ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಭಾರತದ ಪದಕ ಸಂಖ್ಯೆ 26ಕ್ಕೆ ಹೆಚ್ಚಳವಾಗಿದೆ. 

ಭಾರತ ಈ ಬಾರಿ 6 ಚಿನ್ನದ ಪದಕ ಗೆದ್ದಿದ್ದು, ಉಳಿದಂತೆ 9 ಬೆಳ್ಳಿ ಹಾಗೂ 11 ಕಂಚಿನ ಪದಕಗಳೂ ದೇಶದ ಖಾತೆಗೆ ಸೇರ್ಪಡೆಗೊಂಡಿವೆ. ಕ್ರೀಡಾಕೂಟ ಇನ್ನೂ 2 ದಿನ ಬಾಕಿಯಿದ್ದು, ಮತ್ತಷ್ಟು ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ನೋಯ್ಡಾದ 21 ವರ್ಷದ ಪ್ರವೀಣ್‌ ಕುಮಾರ್‌ 2.08 ಮೀ. ಎತ್ತರಕ್ಕೆ ನೆಗೆದರು. 

ಈ ಮೂಲಕ ಅವರು ಏಷ್ಯನ್‌ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಮೊದಲ ಪ್ರಯತ್ನದಲ್ಲಿ 1.89 ಮೀ. ಎತ್ತರಕ್ಕೆ ನೆಗೆದ ಪ್ರವೀಣ್‌, ಬಳಿಕ 1.93 ಮೀಟರ್‌, 1.97 ಮೀಟರ್‌, 2.00 ಮೀಟರ್, 2.03 ಮೀಟರ್‌, 2.06 ಮೀಟರ್‌ ಪ್ರಯತ್ನಗಳಲ್ಲೂ ಸಫಲರಾದರು. 

ಬಳಿಕ 2.08 ಮೀ. ಎತ್ತರಕ್ಕೆ ಹಾರುವ ಎಲ್ಲಾ 3 ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸುವ ಮೂಲಕ ಅಗ್ರಸ್ಥಾನ ಗಿಟ್ಟಿಸಿಕೊಂಡರು. ಅಮೆರಿಕದ ಡೆರೆಕ್‌ ಲಾಕ್ಸಿಡೆಂಡ್‌ 2.06 ಮೀ. ಎತ್ತರಕ್ಕೆ ನೆಗೆದು ಬೆಳ್ಳಿ ಪದಕ ಪಡೆದರೆ, ಉಜ್ಬೇಕಿಸ್ತಾನದ ಟೆಮುರ್‌ಬೆಕ್‌ ಗಿಯಾಜೊವ್‌ 2.03 ಮೀ. ಎತ್ತರಕ್ಕೆ ಹಾರಿ ಕಂಚಿನ ಪದಕ ಜಯಿಸಿದರು.

ಏನಿದು ಟಿ44-ಟಿ64 ವಿಭಾಗ?

ಟಿ46 ಅಂದರೆ ಒಂದು ಕಾಲಿನ ಚಲನೆಯಲ್ಲಿ ಸಮಸ್ಯೆಯಿದ್ದರೆ ಅಥವಾ ಮೊಣಕಾಲಿನ ಕೆಳಗೆ ಒಂದು/ಎರಡು ಕಾಲು ತುಂಡಾಗಿರುವ ಕ್ರೀಡಾಪಟುಗಳು ಸ್ಪರ್ಧಿಸುವ ವಿಭಾಗ. ಆದರೆ ಪ್ರವೀಣ್‌ ಟಿ44 ವಿಭಾಗಕ್ಕೆ ಸೇರುತ್ತಾರೆ. ಅಂದರೆ ಕಾಲಿನ ಕೆಳ ಭಾಗದ ಚಲನೆಯಲ್ಲಿ ಸಮಸ್ಯೆಯಿರುವ ಕ್ರೀಡಾಪಟುಗಳು ಸ್ಪರ್ಧಿಸುವ ವಿಭಾಗ. ಈ ಎರಡೂ ವಿಭಾಗಗಳ ಸ್ಪರ್ಧೆ ಒಟ್ಟಿಗೇ ನಡೆಯುತ್ತದೆ.

ಕೀಳರಿಮೆಯಿಂದ ದೂರಾಗಲು ಕ್ರೀಡೆಯತ್ತ ಬಂದಿದ್ದ ಪ್ರವೀಣ್‌

ಉತ್ತರ ಪ್ರದೇಶದ ನೋಯ್ಡಾದವರಾದ ಪ್ರವೀಣ್‌, ಹುಟ್ಟುವಾಗಲೇ ಸಣ್ಣ ಕಾಲುಗಳನ್ನು ಹೊಂದಿದ್ದರು. ಬಾಲ್ಯದಲ್ಲೇ ಈ ಬಗ್ಗೆ ಕೀಳರಿಮೆ ಹಾಗೂ ಅಭದ್ರತೆ ಉಂಟಾಗುತ್ತಿದ್ದ ಕಾರಣ ಪ್ರವೀಣ್‌, ವಾಲಿಬಾಲ್‌ ಆಡಲು ಶುರು ಮಾಡಿದರು. ಆದರೆ ಸಮರ್ಥ ಕ್ರೀಡಾಪಟುಗಳು ಪಾಲ್ಗೊಳ್ಳುವ ಹೈ ಜಂಪ್‌ನಲ್ಲಿ ಸ್ಪರ್ಧಿಸಿದ ಪ್ರವೀಣ್‌ ಬಳಿಕ ಅದರತ್ತ ಹೆಚ್ಚಿನ ಗಮನ ಹರಿಸಿದರು. 

ಪ್ರವೀಣ್ ಅವರ ಸಾಮರ್ಥ್ಯವನ್ನು ಗುರುತಿಸಿದ ಪ್ಯಾರಾ ಅಥ್ಲೆಟಿಕ್ಸ್ ತರಬೇತುದಾರ ಡಾ.ಸತ್ಯಪಾಲ್ ಸಿಂಗ್, ಪ್ರವೀಣ್‌ರನ್ನು ಪ್ಯಾರಾ ಹೈಜಂಪ್‌ನಲ್ಲಿ ಮುಂದುವರಿಯುವಂತೆ ಮಾಡಿದರು. 2019ರಲ್ಲಿ ವಿಶ್ವ ಜೂನಿಯರ್‌ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಎಲ್ಲರ ಗಮನಸೆಳೆದರು. 2021ರಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಏಷ್ಯನ್‌ ದಾಖಲೆಯೊಂದಿಗೆ ಚಿನ್ನ ಗೆದ್ದ ಅವರು, 2022ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲೂ ಬಂಗಾರದ ಸಾಧನೆ ಮಾಡಿದ್ದಾರೆ.