ಸಾರಾಂಶ
ಕಾನ್ಪುರ: ಬಾಂಗ್ಲಾದೇಶದ ತಾರಾ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ, ಬಾಂಗ್ಲಾ ಕ್ರಿಕೆಟ್ ಮಂಡಳಿ ತವರಿನಲ್ಲಿ ಫೇರ್‌ವೆಲ್ ಪಂದ್ಯ ಆಯೋಜಿಸದಿದ್ದರೆ, ಭಾರತ ವಿರುದ್ಧದ 2ನೇ ಟೆಸ್ಟ್ ತಮ್ಮ ಕೊನೆಯ ಟೆಸ್ಟ್ ಆಗಲಿದೆ ಎಂದು ಹೇಳಿದ್ದಾರೆ.
ಗುರುವಾರ ಈ ಬಗ್ಗೆ ಮಾತನಾಡಿರುವ 37 ವರ್ಷದ ಶಕೀಬ್, ‘ಕಳೆದ ಟಿ20 ವಿಶ್ವಕಪ್‌ನಲ್ಲಿ ಆಡಿದ್ದು ನನ್ನ ಕೊನೆ ಟಿ20 ಪಂದ್ಯ. ಇದು ನಿವೃತ್ತಿಗೆ ಸೂಕ್ತ ಸಮಯ. ವಿದಾಯದ ಬಗ್ಗೆ ಆಯ್ಕೆ ಸಮಿತಿ ಜೊತೆ ಈಗಾಗಲೇ ಮಾತನಾಡಿದ್ದೇನೆ’ ಎಂದಿದ್ದಾರೆ.
‘ಬಾಂಗ್ಲಾದೇಶದ ಮೀರ್ಪುರ ಕ್ರೀಡಾಂಗಣದಲ್ಲಿ ಕೊನೆ ಟೆಸ್ಟ್ ಆಡುವ ಬಯಕೆಯಿದೆ. ಇದಕ್ಕೆ ಬಾಂಗ್ಲಾ ಕ್ರಿಕೆಟ್ ಮಂಡಳಿಯೂ ಒಪ್ಪಿಗೆ ನೀಡಿದೆ. ನನ್ನ ಕೊನೆ ಪಂದ್ಯವನ್ನು ಅಲ್ಲೇ ನಡೆಸಲು ಚಿಂತಿಸುತ್ತಿದ್ದಾರೆ. ಅದು ಸಾಧ್ಯವಾಗದಿದ್ದರೆ ಭಾರತ ವಿರುದ್ಧ ಪಂದ್ಯವೇ ನನ್ನ ಕೊನೆ ಟೆಸ್ಟ್’ ಎಂದು ಶಕೀಬ್ ಹೇಳಿದ್ದಾರೆ.
ಇನ್ನು, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಕೊನೆ ಏಕದಿನ ಪಂದ್ಯವಾಡಲಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಕೀಬ್ ಬಾಂಗ್ಲಾ ಪರ 129 ಟಿ20, 247 ಏಕದಿನ ಹಾಗೂ 70 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಒಟ್ಟು 14700ಕ್ಕೂ ಹೆಚ್ಚು ರನ್ ಕಲೆಹಾಕಿರುವ ಅವರು, 708 ವಿಕೆಟ್ ಕಬಳಿಸಿದ್ದಾರೆ.