ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಭಾರತ ಹ್ಯಾಟ್ರಿಕ್‌ ಪದಕ :ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಸ್ವಪ್ನಿಲ್‌ಗೆ ಐತಿಹಾಸಿಕ ಕಂಚು

| Published : Aug 02 2024, 12:54 AM IST / Updated: Aug 02 2024, 04:24 AM IST

ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಭಾರತ ಹ್ಯಾಟ್ರಿಕ್‌ ಪದಕ :ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಸ್ವಪ್ನಿಲ್‌ಗೆ ಐತಿಹಾಸಿಕ ಕಂಚು
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಭಾರತ ಹ್ಯಾಟ್ರಿಕ್‌ ಪದಕ ಸಾಧನೆ. ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ನಲ್ಲಿ ಸ್ವಪ್ನಿಲ್‌ಗೆ ಐತಿಹಾಸಿಕ ಕಂಚು. ಈ ವಿಭಾಗದಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ಸ್‌ ಪದಕ.

ಪ್ಯಾರಿಸ್‌: 2024ರ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್‌ಗಳ ಪದಕ ಬೇಟೆ ಮುಂದುವರಿದಿದೆ. ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ ವಿಭಾಗದಲ್ಲಿ ಸ್ವಪ್ನಿಲ್‌ ಕುಸಾಲೆ ಐತಿಹಾಸಿಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಪದಕ ಗಳಿಕೆ 3ಕ್ಕೆ ಹೆಚ್ಚಳವಾಗಿದೆ. 

ಈ ಎಲ್ಲಾ ಪದಕಗಳೂ ಶೂಟಿಂಗ್‌ನಲ್ಲೇ ಬಂದಿರುವುದು ವಿಶೇಷ.ಗುರುವಾರ ನಡೆದ ಸ್ಪರ್ಧೆಯಲ್ಲಿ ಸ್ವಪ್ನಿಲ್‌ 451.7 ಅಂಕಗಳೊಂದಿಗೆ 3ನೇ ಸ್ಥಾನ ಪಡೆದರು. ಒಂದು ಹಂತದಲ್ಲಿ 6ನೇ ಸ್ಥಾನದಲ್ಲಿದ್ದರೂ, ಬಳಿಕ ಪುಟಿದೆದ್ದ ಸ್ವಪ್ನಿಲ್‌ ಐತಿಹಾಸಿಕ ಪದಕಕ್ಕೆ ಕೊರಳೊಡ್ಡಿದರು. 

ಅವರು ಮಂಡಿಯೂರಿ ಶೂಟ್‌ ಮಾಡುವ ವಿಭಾಗದಲ್ಲಿ 153.3 (50.8, 50.9, 51.6) ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದರೆ, ಪ್ರೋನ್‌ ವಿಭಾಗ(ನೆಲದ ಮೇಲೆ ಮಲಗಿ ಶೂಟ್‌ ಮಾಡುವುದು)ದಲ್ಲಿ 156.8(ಕ್ರಮವಾಗಿ 52.7, 52.2, 51.9) ಅಂಕದೊಂದಿಗೆ 5ನೇ ಸ್ಥಾನಕ್ಕೇರಿದರು. ಆದರೆ ನಿಂತುಕೊಂಡು ಶೂಟ್‌ ಮಾಡುವ ವಿಭಾಗದಲ್ಲಿ 2 ಸೆಟ್‌ಗಳಲ್ಲಿ 101.5 ಅಂಕ ಗಳಿಸಿ 4ನೇ ಸ್ಥಾನಕ್ಕೆ ಜಿಗಿದರು.

ಎಲಿಮಿನೇಷನ್‌ ಸುತ್ತು ಆರಂಭಗೊಂಡ ಬಳಿಕ ಮತ್ತೆ ಸುಧಾರಿತ ಪ್ರದರ್ಶನ ತೋರಿದ ಸ್ವಪ್ನಿಲ್‌, ಕೊನೆ 3 ಪ್ರಯತ್ನಗಳಲ್ಲಿ ಕ್ರಮವಾಗಿ 9.4, 9.9 ಹಾಗೂ 10.0 ಅಂಕಗಳನ್ನು ಗಳಿಸುವ ಮೂಲಕ ಕಂಚಿನ ಪದಕ ಖಚಿತಪಡಿಸಿಕೊಂಡರು. ಚೀನಾದ ಯುಕುನ್‌ ಲಿಯು(463.6 ಅಂಕ) ಚಿನ್ನ, ಉಕ್ರೇನ್‌ನ ಸೆರ್ಹಿ ಕುಲಿಶ್‌(461.3) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.ಈ ಬಾರಿ ಕ್ರೀಡಾಕೂಟದಲ್ಲಿ ಮನು ಭಾಕರ್‌ 10 ಮೀ. ಏರ್‌ ರೈಫಲ್‌ ವೈಯಕ್ತಿಕ, ಮನು-ಸರಬ್ಜೋತ್‌ ಸಿಂಗ್‌ 10 ಮೀ. ಏರ್‌ ರೈಫಲ್‌ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. 

ಶೂಟಿಂಗ್‌ನಲ್ಲಿ 3 ಪದಕ: ಭಾರತದ ಶ್ರೇಷ್ಠ ಸಾಧನೆ

ಭಾರತ ಈ ಬಾರಿ ಶೂಟಿಂಗ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಕ್ರೀಡಾಕೂಟದಲ್ಲಿ 3 ಪದಕ ಗೆದ್ದಿದ್ದು, ಭಾರತೀಯ ಶೂಟಿಂಗ್‌ ಇತಿಹಾಸದಲ್ಲೇ ಇದು ಶ್ರೇಷ್ಠ ಸಾಧನೆ. 2012ರಲ್ಲಿ ಭಾರತ ಶೂಟಿಂಗ್‌ನಲ್ಲಿ 1 ಬೆಳ್ಳಿ, 1 ಕಂಚು ಗೆದ್ದಿತ್ತು. ಆ ದಾಖಲೆಯನ್ನು ಈ ಬಾರಿ ಪತನಗೊಂಡಿದೆ.