ಸಾರಾಂಶ
ಪ್ಯಾರಿಸ್: ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಚೊಚ್ಚಲ ಪದಕ, ಸಿಂಗಲ್ಸ್‌ನಲ್ಲಿ ಚೊಚ್ಚಲ ಚಿನ್ನ ಗೆಲ್ಲು ಭಾರತದ ಕನಸು ಭಗ್ನಗೊಂಡಿದೆ. ಈ ಬಾರಿ ಕ್ರೀಡಾಕೂಟದಲ್ಲಿ ಐತಿಹಾಸಿಕ ಚಿನ್ನದ ಪದಕದ ನಿರೀಕ್ಷೆ ಮೂಡಿಸಿದ್ದ ವಿಶ್ವ ನಂ.5 ಪುರುಷ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ, ಪಿ.ವಿ.ಸಿಂಧು ಕ್ವಾರ್ಟರ್ ಫೈನಲ್‌ನಲ್ಲೇ ಸೋತು ಅಭಿಯಾನ ಕೊನೆಗೊಳಿಸಿದ್ದಾರೆ.
ಗುರುವಾರ ವಿಶ್ವ ನಂ.3, ಮಲೇಷ್ಯಾದ ಆ್ಯರೊನ್ ಚಿಯಾ-ಸೊಹ್ ವೂಯಿ ಯಿಕ್ ವಿರುದ್ಧ ಭಾರತೀಯ ಜೋಡಿಗೆ 21-13, 14-21, 16-21 ಗೇಮ್‌ಗಳಲ್ಲಿ ವೀರೋಚಿತ ಸೋಲು ಎದುರಾಯಿತು.
2022ರ ವಿಶ್ವ ಚಾಂಪಿಯನ್‌ಶಿಪ್, ಏಷ್ಯನ್ ಗೇಮ್ಸ್ ಪದಕ ವಿಜೇತ ಮಲೇಷ್ಯಾ ಜೋಡಿ ವಿರುದ್ಧ ಸಾತ್ವಿಕ್-ಚಿರಾಗ್ ಕಳೆದ 3 ಮುಖಾಮುಖಿಯಲ್ಲೂ ಗೆದ್ದಿದ್ದರು. ಆದರೆ ಮಹತ್ವದ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಜೋಡಿ ಆಘಾತಕಾರಿ ಸೋಲನುಭವಿಸಿತು.
ಮೊದಲ ಗೇಮ್‌ನಲ್ಲಿ ಗೆದ್ದ ಹೊರತಾಗಿಯೂ ಬಳಿಕ 2 ಗೇಮ್‌ಗಳಲ್ಲಿ ಕೆಲ ಅನಗತ್ಯ ತಪ್ಪುಗಳನ್ನೆಸಗಿದ್ದು ಸಾತ್ವಿಕ್-ಚಿರಾಗ್ ಸೋಲಿಗೆ ಕಾರಣವಾಯಿತು.ಇನ್ನು, ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಸಿಂಧು, ಚೀನಾದ ಹೆ ಬಿಂಗ್‌ಜಿಯಾವೊ ವಿರುದ್ಧ 21-19 21-14 ಗೇಮ್‌ಗಳಲ್ಲಿ ಸೋತು ಹೊರಬಿದ್ದರು. ಇದರೊಂದಿಗೆ ಕಳೆದೆರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿದ್ದ ಸಿಂಧು ಅವರ ಹ್ಯಾಟ್ರಿಕ್ ಪದಕ ಕನಸು ಭಗ್ನಗೊಂಡಿತು.