ಸಾರಾಂಶ
ಸೆಮೀಸ್‌ನಲ್ಲಿ ಬಾಂಗ್ಲಾ ವಿರುದ್ಧ 10 ವಿಕೆಟ್ ಜಯಭೇರಿ. ಭಾನುವಾರ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೆಣಸು. ಸೆಮೀಸ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿರುವ ಶ್ರೀಲಂಕಾ ತಂಡ.
ದಾಂಬುಲಾ: 9ನೇ ಆವೃತ್ತಿ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ನಿರೀಕ್ಷೆಯಂತೆಯೇ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ, ಶುಕ್ರವಾರ ನಡೆದ ಬಾಂಗ್ಲಾದೇಶ ವಿರುದ್ಧ ಸೆಮಿಫೈನಲ್‌ನಲ್ಲಿ 10 ವಿಕೆಟ್ ಭರ್ಜರಿ ಜಯಭೇರಿ ಬಾರಿಸಿತು.
ಇದರೊಂದಿಗೆ ತಂಡ ಸತತ 9ನೇ ಆವೃತ್ತಿಯಲ್ಲೂ ಫೈನಲ್‌ಗೆ ಲಗ್ಗೆ ಇಟ್ಟಿತು.ಮೊದಲು ಬ್ಯಾಟ್ ಮಾಡಿದ 2018ರ ಚಾಂಪಿಯನ್ ಬಾಂಗ್ಲಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 80 ರನ್ ಕಲೆಹಾಕಿತು. ರೇಣುಕಾ ಸಿಂಗ್ ಹಾಗೂ ರಾಧಾ ಯಾದವ್ ಮಾರಕ ದಾಳಿ ಮುಂದೆ ಬಾಂಗ್ಲಾ ಬ್ಯಾಟರ್‌ಗಳು ನಿರುತ್ತರರಾದರು.
ನಾಯಕಿ ನಿಗಾರ್ ಸುಲ್ತಾನ (32), ಶೋರ್ನಾ ಅಕ್ತರ್ (ಔಟಾಗದೆ 19) ಹೊರತುಪಡಿಸಿ ಬೇರೆ ಯಾರಿಗೂ ಎರಡಂಕಿ ಮೊತ್ತ ಗಳಿಸಲಾಗಲಿಲ್ಲ. ರೇಣುಕಾ 4 ಓವರಲ್ಲಿ 10 ರನ್‌ಗೆ 3, ರಾಧಾ 14 ರನ್‌ಗೆ 3 ವಿಕೆಟ್ ಕಿತ್ತರು.ಸುಲಭ ಗುರಿಯನ್ನು ಭಾರತ ಕೇವಲ 11 ಓವರ್‌ಗಳಲ್ಲಿ, ಯಾವುದೇ ವಿಕೆಟ್ ನಷ್ಟವಿಲ್ಲದೇ ಬೆನ್ನತ್ತಿ ಜಯಗಳಿಸಿತು. ಸ್ಮೃತಿ ಮಂಧನಾ 39 ಎಸೆತಗಳಲ್ಲಿ 55 ರನ್ ಸಿಡಿಸಿದರೆ, ಶಫಾಲಿ ವರ್ಮಾ 28 ಎಸೆತಗಳಲ್ಲಿ 26 ರನ್ ಕೊಡುಗೆ ನೀಡಿದರು.ಸ್ಕೋರ್: ಬಾಂಗ್ಲಾ 20 ಓವರಲ್ಲಿ 80/8 (ಸುಲ್ತಾನ 32, ಅಕ್ತರ್ 19, ರೇಣುಕಾ 3-10, ರಾಧಾ 3-14), ಭಾರತ 11 ಓವರಲ್ಲಿ 83//0 (ಸ್ಮೃತಿ 55*, ಶಫಾಲಿ 26*) ಪಂದ್ಯಶ್ರೇಷ್ಠ: ರೇಣುಕಾ ಸಿಂಗ್
ನಾಳೆ ಫೈನಲ್
7 ಬಾರಿ ಚಾಂಪಿಯನ್ ಭಾರತ ಭಾನುವಾರ ಶ್ರೀಲಂಕಾ ವಿರುದ್ಧ ಫೈನಲ್‌ನಲ್ಲಿ ಸೆಣಸಾಡಲಿದೆ. ಶುಕ್ರವಾರ ನಡೆದ 2ನೇ ಸೆಮಿಫೈನಲ್‌ನಲ್ಲಿ ಆತಿಥೇಯ ಲಂಕಾ ತಂಡ ಪಾಕಿಸ್ತಾನ ವಿರುದ್ಧ 3 ವಿಕೆಟ್ ರೋಚಕ ಜಯಗಳಿಸಿ, 6ನೇ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು. ಲಂಕಾ ಈ ಹಿಂದಿನ 8 ಆವೃತ್ತಿಗಳ ಪೈಕಿ 5 ಬಾರಿ ಫೈನಲ್‌ನಲ್ಲಿ ಭಾರತ ವಿರುದ್ಧ ಸೋಲುಂಡಿದೆ.