ಏಕದಿನ ಸರಣಿ ಕೊನೆ ಪಂದ್ಯ : ಆಫ್ಘನ್‌ ವಿರುದ್ಧ ಕ್ಲೀನ್‌ಸ್ವೀಪ್‌ನಿಂದ ಪಾರಾದ ದಕ್ಷಿಣ ಆಫ್ರಿಕಾ

| Published : Sep 24 2024, 01:56 AM IST / Updated: Sep 24 2024, 04:22 AM IST

ಸಾರಾಂಶ

ಮಾರ್ಕ್‌ರಮ್‌ ಔಟಾಗದೆ 69 ರನ್‌ ಸಿಡಿಸಿದರು. ಅಫ್ಘಾನಿಸ್ತಾನದ ರಹ್ಮಾನುಲ್ಲಾ ಗುರ್ಬಾಜ್‌ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಶಾರ್ಜಾ: ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಯ 3ನೇ ಹಾಗೂ ಕೊನೆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್‌ ಗೆಲುವು ಸಾಧಿಸಿದ್ದು, ಕ್ಲೀನ್‌ಸ್ವೀಪ್‌ ಮುಖಭಂಗದಿಂದ ಪಾರಾಗಿದೆ. ಆರಂಭಿಕ 2 ಪಂದ್ಯಗಳಲ್ಲಿ ಗೆದ್ದಿದ್ದ ಆಫ್ಘನ್‌, ಸರಣಿಯನ್ನು 2-1 ಅಂತರದಲ್ಲಿ ಕೈವಶಪಡಿಸಿಕೊಂಡಿತು. 

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘನ್‌, ರಹ್ಮಾನುಲ್ಲಾ ಗುರ್ಬಾಜ್‌ ಏಕಾಂಗಿ ಹೋರಾಟದ ಹೊರತಾಗಿಯೂ 34 ಓವರ್‌ಗಳಲ್ಲಿ 169 ರನ್‌ಗೆ ಆಲೌಟಾಯಿತು. ಗುರ್ಬಾಜ್‌ 94 ಎಸೆತಗಳಲ್ಲಿ 89 ರನ್‌ ಸಿಡಿಸಿದರು. ಉಳಿದಂತೆ ಅಲ್ಲಾಹ್‌ ಘಜನ್‌ಫರ್‌ 31 ರನ್‌ ಕೊಡುಗೆ ನೀಡಿದರು. ಸುಲಭ ಗುರಿಯನ್ನು ದ.ಆಫ್ರಿಕಾ 33 ಓವರ್‌ಗಳಲ್ಲಿ ಬೆನ್ನತ್ತಿ ಜಯಗಳಿಸಿದರು. ಮಾರ್ಕ್‌ರಮ್‌ ಔಟಾಗದೆ 69 ರನ್‌ ಸಿಡಿಸಿದರು. ಗುರ್ಬಾಜ್‌ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮೊದಲ ಟೆಸ್ಟ್‌: ನ್ಯೂಜಿಲೆಂಡ್‌ ವಿರುದ್ಧ ಶ್ರೀಲಂಕಾಕ್ಕೆ ಗೆಲುವು

ಗಾಲೆ(ಶ್ರೀಲಂಕಾ): ನ್ಯೂಜಿಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ 63 ರನ್‌ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.ಗೆಲುವಿಗೆ 275 ರನ್‌ ಗುರಿ ಪಡೆದಿದ್ದ ಪ್ರವಾಸಿ ಕಿವೀಸ್‌ ತಂಡ 211 ರನ್‌ಗೆ ಆಲೌಟಾಯಿತು. 

4ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 207 ರನ್‌ ಗಳಿಸಿದ್ದ ತಂಡಕ್ಕೆ ಕೊನೆ ದಿನವಾದ ಸೋಮವಾರ 68 ರನ್‌ ಅಗತ್ಯವಿತ್ತು. ಆದರೆ ಕಿವೀಸನ್ನು ಆಲೌಟ್‌ ಮಾಡಲು ಲಂಕಾ ಬೌಲರ್‌ಗಳಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. 3.4 ಓವರ್‌ಗಳಲ್ಲಿ 4 ರನ್‌ ಸೇರಿಸುವಷ್ಟರಲ್ಲಿ ಕಿವೀಸ್‌ ಸರ್ವಪತನ ಕಂಡಿತು. ರಚಿನ್‌ ರವೀಂದ್ರ(92) ಹಿಂದಿನ ದಿನದ ಮೊತ್ತಕ್ಕೆ ಕೇವಲ 1 ರನ್‌ ಸೇರಿಸಿ ಔಟಾದರು. ಪ್ರಬಾತ್‌ ಜಯಸೂರ್ಯ 5, ರಮೇಶ್ ಮೆಂಡಿಸ್‌ 3 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 305 ರನ್ ಗಳಿಸಿದ್ದರೆ, ಕಿವೀಸ್‌ 340 ರನ್‌ ಕಲೆಹಾಕಿ ಇನ್ನಿಂಗ್ಸ್‌ ಮುನ್ನಡೆ ಪಡೆದಿತ್ತು. ಆದರೆ 2ನೇ ಇನ್ನಿಂಗ್ಸ್‌ನಲ್ಲಿ ತೀವ್ರ ಪ್ರತಿರೋಧ ತೋರಿದ ಆತಿಥೇಯ ತಂಡ 309 ರನ್‌ ಗಳಿಸಿತ್ತು. ಉಭಯ ತಂಡಗಳ ನಡುವಿನ 2ನೇ ಪಂದ್ಯ ಗುರುವಾರ ಆರಂಭಗೊಳ್ಳಲಿದೆ. ಲಂಕಾ ತಂಡ ಕಿವೀಸ್‌ ವಿರುದ್ಧ 2009ರ ಬಳಿಕ ಮೊದಲ ಬಾರಿ ಟೆಸ್ಟ್‌ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.