ಟಿ20 ವಿಶ್ವಕಪ್‌ನಲ್ಲಿ 2009 ಹಾಗೂ 2014ರಲ್ಲಿ ಸೆಮೀಸ್‌ ತಲುಪಿದ್ದರೂ ಫೈನಲ್‌ಗೇರುವ ಅದೃಷ್ಟ ತಂಡಕ್ಕೆ ಲಭಿಸಿರಲಿಲ್ಲ.

ಗಯಾನಾ: ಐಸಿಸಿ ವಿಶ್ವಕಪ್‌ನಲ್ಲಿ ಫೈನಲ್‌ಗೇರಲು 32 ವರ್ಷಗಳಿಂದಲೂ ಕಾಯುತ್ತಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಕೊನೆಗೂ ಫಲ ಸಿಕ್ಕಿದೆ.

1992ರಲ್ಲಿ ಚೊಚ್ಚಲ ಬಾರಿ ವಿಶ್ವಕಪ್‌(ಏಕದಿನ) ಆಡಿದ್ದ ದ.ಆಫ್ರಿಕಾ ಮೊದಲ ಪ್ರಯತ್ನದಲ್ಲೇ ಸೆಮೀಸ್‌ಗೇರಿತ್ತು. ಆದರೆ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಆಫ್ರಿಕಾ ಸೋತಿತ್ತು. ಆ ಬಳಿಕ 1999, 2007, 2015, 2023ರ ಏಕದಿನ ವಿಶ್ವಕಪ್‌ನಲ್ಲೂ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿತ್ತು. ಟಿ20 ವಿಶ್ವಕಪ್‌ನಲ್ಲಿ 2009 ಹಾಗೂ 2014ರಲ್ಲಿ ಸೆಮೀಸ್‌ ತಲುಪಿದ್ದರೂ ಫೈನಲ್‌ಗೇರುವ ಅದೃಷ್ಟ ತಂಡಕ್ಕೆ ಲಭಿಸಿರಲಿಲ್ಲ. 

ವೆಲ್‌ಡನ್‌ ಆಫ್ಘನ್‌

ಕೆಲ ವರ್ಷಗಳ ಹಿಂದಷ್ಟೇ ಪ್ರಮುಖ ತಂಡಗಳ ವಿರುದ್ಧ ಆಡಲು ಶುರುವಿಟ್ಟಿದ್ದ ಅಫ್ಘಾನಿಸ್ತಾನ ಈ ಬಾರಿ ಟಿ20 ವಿಶ್ವಕಪ್‌ ಸೆಮಿಫೈನಲ್‌ಗೇರಲಿದೆ ಎಂದು ಬಹುತೇಕರು ಊಹಿಸಿರಲಿಕ್ಕಿಲ್ಲ. ಆದರೆ ಕ್ರಿಕೆಟ್‌ ತಜ್ಞರು, ಅಭಿಮಾನಿಗಳ ಲೆಕ್ಕಾಚಾರ ತಲೆಕೆಳಗೆ ಮಾಡುವಂತೆ ಆಫ್ಘನ್‌ ಸೆಮೀಸ್‌ಗೇರಿತ್ತು. ಗುಂಪು ಹಂತದಲ್ಲಿ ನ್ಯೂಜಿಲೆಂಡ್‌, ಸೂಪರ್‌-8 ಹಂತದಲ್ಲಿ ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದ್ದ ತಂಡ ಸೆಮೀಸ್‌ನಲ್ಲೂ ಗೆಲ್ಲುವ ವಿಶ್ವಾಸದಲ್ಲಿದ್ದರೂ ಅದು ಈಡೇರಲಿಲ್ಲ. ಆಫ್ಘನ್‌ನ ಸಾಧನೆಯನ್ನು ಕ್ರಿಕೆಟ್‌ ಜಗತ್ತೇ ಕೊಂಡಾಡುತ್ತಿದ್ದು, ಭವಿಷ್ಯದ ಸೂಪರ್‌ ಪವರ್‌ ಕ್ರಿಕೆಟ್‌ ದೇಶವಾಗಲಿದೆ ಎಂದು ಶ್ಲಾಘಿಸುತ್ತಿದ್ದಾರೆ.

ಟಿ20 ವಿಶ್ವಕಪ್‌ ನಾಕೌಟ್‌ ಪಂದ್ಯದಲ್ಲಿ ಕನಿಷ್ಠ ಸ್ಕೋರ್

ಅಫ್ಘಾನಿಸ್ತಾನ ಗಳಿಸಿದ 56 ರನ್‌ ಟಿ20 ವಿಶ್ವಕಪ್‌ನ ನಾಕೌಟ್‌ ಪಂದ್ಯದಲ್ಲಿ ದಾಖಲಾದ ಕನಿಷ್ಠ ಸ್ಕೋರ್‌. 2009ರಲ್ಲಿ ಶ್ರೀಲಂಕಾ ವಿರುದ್ಧ ವಿಂಡೀಸ್‌ 101, 2012ರಲ್ಲಿ ವಿಂಡೀಸ್‌ ವಿರುದ್ಧ ಶ್ರೀಲಂಕಾ 101 ರನ್‌ಗೆ ಆಲೌಟಾಗಿದ್ದು ಈ ಹಿಂದಿನ ದಾಖಲೆ.