ಸಾರಾಂಶ
ಚೆನ್ನೈ: 4ನೇ ಆವೃತ್ತಿಯ ದಕ್ಷಿಣ ಏಷ್ಯಾ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಬುಧವಾರದಿಂದ ಚೆನ್ನೈನ ಜವಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. ಕೂಟ ಸೆ.13ರ ವರೆಗೆ ನಡೆಯಲಿದ್ದು, ಕರ್ನಾಟಕದ ಐವರು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಪುರುಷರ 800 ಮೀ. ಓಟದಲ್ಲಿ ಬೋಪಣ್ಣ, ಮಹಿಳೆಯರ 100 ಮೀ. ಹರ್ಡಲ್ಸ್ ಹಾಗೂ 200 ಮೀ. ರೇಸ್‌ನಲ್ಲಿ ಉನ್ನತಿ ಅಯ್ಯಪ್ಪ, 4*100 ಮೀ. ರಿಲೇ ಸ್ಪರ್ಧೆಯಲ್ಲಿ ನಿಯೋಲ್ ಕಾರ್ನೆಲಿಯೊ, ಮಹಿಳೆಯರ 4*100 ಮೀ. ರಿಲೇ ಹಾಗೂ 100 ಮೀ. ಓಟದಲ್ಲಿ ಸುಧೀಕ್ಷಾ ವಿ. ಹಾಗೂ ಪುರುಷರ 400 ಮೀ. ಓಟ, 4*400 ಮೀ. ರಿಲೇ ಸ್ಪರ್ಧೆಯಲ್ಲಿ ರಿಹಾನ್ ಸಿ. ಸ್ಪರ್ಧಿಸಲಿದ್ದಾರೆ. ಬಿಂದು ರಾಣಿ ಹಾಗೂ ಶಿವಾನಂದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಮಾಹಿತಿ ನೀಡಿದೆ.
45ನೇ ಚೆಸ್ ಒಲಿಂಪಿಯಾಡ್ ಹಂಗೇರಿಯಲ್ಲಿ ಇಂದು ಶುರು
ಬುಡಾಪೆಸ್ಟ್(ಹಂಗೇರಿ): 45ನೇ ಆವೃತ್ತಿಯ ಚೆಸ್ ಒಲಿಂಪಿಯಾಡ್ ಬುಧವಾರರಿಂದ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಆರಂಭಗೊಳ್ಳಲಿದೆ. ಭಾರತದ ಆರ್.ಪ್ರಜ್ಞಾನಂದ, ಡಿ.ಗುಕೇಶ್ ಸೇರಿ ಪ್ರಮುಖ ಆಟಗಾರರು ಪಾಲ್ಗೊಳ್ಳಲಿದ್ದಾರೆ.ಕಳೆದ ಬಾರಿ ತಮಿಳುನಾಡಿನಲ್ಲಿ ನಡೆದಿದ್ದ ಸಟೂರ್ನಿಯಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಕಂಚಿನ ಪದಕ ಗೆದ್ದಿದ್ದವು. ಈ ಬಾರಿ ಸುಧಾರಿತ ಪ್ರದರ್ಶನ ನೀಡಿ ಚಿನ್ನ ಗೆಲ್ಲುವ ಕಾತರದಲ್ಲಿವೆ. ಪುರುಷರ ತಂಡದಲ್ಲಿ ಪ್ರಜ್ಞಾನಂದ, ಗುಕೇಶ್ ಜೊತೆ ಅರ್ಜುನ್ ಎರಿಗೈಸಿ, ವಿದಿತ್ ಗುಜರಾತಿ ಹಾಗೂ ಪಿ.ಹರಿಕೃಷ್ಣ ಕೂಡಾ ಇದ್ದಾರೆ. ಇನ್ನು ಮಹಿಳಾ ವಿಭಾಗದಲ್ಲಿ ಹರಿಕಾ ದ್ರೋಣವಲ್ಲಿ, ಆರ್.ವೈಶಾಲಿ, ದಿವ್ಯಾ ದೇಶ್‌ಮುಖ್, ವಂತಿಕಾ ಅಗರ್‌ವಾರ್ ಇದ್ದಾರೆ. ಈ ಬಾರಿ ಮುಕ್ತ ವಿಭಾಗದಲ್ಲಿ 191, ಮಹಿಳಾ ವಿಭಾಗದಲ್ಲಿ 180 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಟೂರ್ನಿಯ ಎರಡೂ ವಿಭಾಗಗಳಲ್ಲಿ 11 ಸುತ್ತಿನ ಪಂದ್ಯಗಳು ನಡೆಯಲಿವೆ. ಪ್ರತಿ ಪಂದ್ಯದ ಗೆಲುವಿಗೆ 2 ಅಂಕಗಳು ಲಭಿಸಲಿವೆ.