2ನೇ ಟೆಸ್ಟ್‌: 4ನೇ ದಿನ ಫಾಲೋ ಆನ್‌ಗೆ ತುತ್ತಾಗಿದ್ದ ಲಂಕಾ ಕೊನೆ ದಿನ ಸಾಹಸಿಕ ಪ್ರದರ್ಶನ । ದಿನಪೂರ್ತಿ ಆಡಿ 9 ವಿಕೆಟ್‌ಗೆ 429 ರನ್‌ಕೆಲ ಕ್ರಮಾಂಕದ ಬ್ಯಾಟರ್ಸ್‌ ಜೊತೆಗೂಡಿ ಸೋನಲ್‌ ದಿನುಶಾ ಅದ್ಭುತ ಪ್ರದರ್ಶನ । 216 ರನ್‌ ಲೀಡ್ ಪಡೆದಿದ್ದಾಗ ಡಿಕ್ಲೇರ್‌, ಪಂದ್ಯ ಡ್ರಾ

ಕೊಲಂಬೊ: ಯುವ ಬ್ಯಾಟರ್‌ ಸೋನಲ್‌ ದಿನುಶಾ ಅಮೋಘ ಶತಕ ಹಾಗೂ ಕೆಲ ಕ್ರಮಾಂಕದ ಬ್ಯಾಟರ್‌ಗಳ ದಿಟ್ಟ ಹೋರಾಟದಿಂದಾಗಿ ಭಾರತ ವಿರುದ್ಧ ಸೋಲುವ ಪಂದ್ಯದಲ್ಲಿ ಶ್ರೀಲಂಕಾ ಡ್ರಾ ಮಾಡಿಕೊಂಡಿದೆ. 2ನೇ ಟೆಸ್ಟ್‌ ಪಂದ್ಯದ 4ನೇ ದಿನ ಆತಿಥೇಯ ತಂಡದ ಮೇಲೆ ಫಾಲೋಆನ್‌ ಹೇರಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಭಾರತ, ಕೊನೆ ದಿನ ನೀರಸ ಪ್ರದರ್ಶನ ನೀಡಿತು. ಹೀಗಾಗಿ ಸುಲಭದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈಚೆಲ್ಲಿ, ಡ್ರಾಗೆ ತೃಪ್ತಿಪಟ್ಟುಕೊಂಡಿತು. ಮೊದಲ ಪಂದ್ಯ ಗೆದ್ದಿದ್ದ ಭಾರತವು 2 ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 9 ವಿಕೆಟ್‌ಗೆ 503 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿತ್ತು. ಬಳಿಕ ಲಂಕಾವನ್ನು 290ಕ್ಕೆ ನಿಯಂತ್ರಿಸಿ, 213 ರನ್‌ ಮುನ್ನಡೆ ಪಡೆದಿದ್ದ ಭಾರತ ತಂಡ ಫಾಲೋಆನ್‌ ಹೇರಿತ್ತು. 2ನೇ ಇನ್ನಿಂಗ್ಸ್‌ನಲ್ಲಿ 4ನೇ ದಿನದಂತ್ಯಕ್ಕೆ 6 ವಿಕೆಟ್‌ ನಷ್ಟದಲ್ಲಿ 229 ರನ್‌ ಗಳಿಸಿ, ಕೇವಲ 16 ರನ್‌ ಮುನ್ನಡೆಯಲ್ಲಿದ್ದ ಲಂಕಾ ಕೊನೆ ದಿನವಾದ ಗುರುವಾರ ಅಭೂತಪೂರ್ವ ಪ್ರದರ್ಶನ ನೀಡಿತು.

ಸೋನಲ್‌ ಮ್ಯಾಜಿಕ್‌:

ಕೊನೆ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದ ಸೋನಲ್‌ ದಿನುಶಾ ಹಾಗೂ ಕೆಶಾರ ನುವಾಂಥ ಜೋಡಿ ಬರೋಬ್ಬರಿ 40 ಓವರ್‌(242 ಎಸೆತ) ಆಡಿ 112 ರನ್‌ ಸೇರಿಸಿತು. 150 ಎಸೆತಗಳನ್ನು ಎದುರಿಸಿ 46 ರನ್‌ ಗಳಿಸಿದ ಕೆಶಾರಗೆ ಮಾನವ್‌ ಸುಥಾರ್‌ ಪೆವಿಲಿಯನ್‌ ಹಾದಿ ತೋರಿದರು. ಈ ವೇಳೆಗಾಗಲೇ ಲಂಕಾದ ಮುನ್ನಡೆ 100 ದಾಟಿತ್ತು. ಬಳಿಕ ಪ್ರಭಾತ್‌ ಜಯಸೂರ್ಯ ಬೇಗನೇ ನಿರ್ಗಮಿಸಿದರೂ, 9ನೇ ವಿಕೆಟ್‌ಗೆ ಸೋನಲ್‌ಗೆ ಜೊತೆಯಾದ ಲಹಿರು ಕುಮಾರ, ಭಾರತೀಯರ ಬೆವರಿಳಿಸಿದರು. ಈ ಜೋಡಿ 169 ಎಸೆತಗಳನ್ನು ಎದುರಿಸಿ 47 ರನ್‌ ಸೇರಿಸಿತು. ಇದರಲ್ಲಿ ಲಹಿರು ಪಾಲು 90 ಎಸೆತಕ್ಕೆ 12 ರನ್‌. ಭಾರತಕ್ಕೆ ಕೊನೆ ವಿಕೆಟ್‌ ಕೂಡಾ ಮುಳ್ಳಾಗಿ ಪರಿಣಮಿಸಿತು. ಅಸಿತಾ ಫೆರ್ನಾಂಡೊ 24 ಎದುರಿಸಿ ಒಂದೂ ರನ್‌ ಗಳಿಸದಿದ್ದರೂ, ಕ್ರೀಸ್‌ನಲ್ಲಿ ಭದ್ರವಾಗಿ ನಿಂತು ಸೋನಲ್‌ಗೆ ಬೆನ್ನೆಲುಬಾದರು. 154 ಓವರ್‌ಗಳಲ್ಲಿ 9 ವಿಕೆಟ್‌ಗೆ 429 ರನ್‌ ಗಳಿಸಿದ್ದಾಗ ಲಂಕಾ ಡಿಕ್ಲೇರ್‌ ಘೋಷಿಸಿತಾದರೂ, ಕೂಡಲೇ ಉಭಯ ತಂಡಗಳು ಕೈಕುಲುಕಿ ಪಂದ್ಯ ಡ್ರಾ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 103 ರನ್‌ ಗಳಿಸಿದ್ದ ಸೋನಲ್‌, ಈ ಬಾರಿ 264 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 133 ರನ್‌ ಸಿಡಿಸಿ ತಂಡಕ್ಕೆ ಆಪತ್ಬಾಂಧವರಾದರು. ಜಡೇಜಾ, ಸುಥಾರ್‌ ತಲಾ 3 ವಿಕೆಟ್‌ ಪಡೆದರು.

ಸ್ಕೋರ್‌: ಭಾರತ ಮೊದಲ ಇನ್ನಿಂಗ್ಸ್‌ 503/9 ಡಿಕ್ಲೇರ್‌, ಶ್ರೀಲಂಕಾ ಮೊದಲ ಇನ್ನಿಂಗ್ಸ್‌ 290/10 ಮತ್ತು 2ನೇ ಇನ್ನಿಂಗ್ಸ್‌ 429/9 ಡಿಕ್ಲೇರ್ (ಸೋನಲ್‌ ಔಟಾಗದೆ 133, ಕೆಶಾರ 46, ಜಡೇಜಾ 3-94, ಮಾನವ್‌ 3-121)

ಪಂದ್ಯಶ್ರೇಷ್ಠ: ಸೋನಲ್‌ ದಿನುಶಾ । ಸರಣಿಶ್ರೇಷ್ಠ: ದೇವದತ್‌ ಪಡಿಕ್ಕಲ್‌

2 ಪಂದ್ಯದಲ್ಲಿ ದಿನುಶಾ 3 ಸೆಂಚುರಿ, 420 ರನ್‌

25 ವರ್ಷದ ಯುವ ಬ್ಯಾಟರ್‌ ಸೋನಲ್‌ ದಿನುಶಾ ಈ ಸರಣಿಯ 2 ಪಂದ್ಯಗಳಲ್ಲಿ ಒಟ್ಟು 420 ರನ್‌ ಕಲೆಹಾಕಿದ್ದಾರೆ. ಇದರಲ್ಲಿ 3 ಶತಕ, 1 ಅರ್ಧಶತಕ ಒಳಗೊಂಡಿವೆ. ಮೊದಲ ಪಂದ್ಯದಲ್ಲಿ 100 ಹಾಗೂ 84 ರನ್‌ ಗಳಿಸಿದ್ದ ದಿನುಶಾ, 2ನೇ ಪಂದ್ಯದಲ್ಲಿ 103 ಹಾಗೂ ಔಟಾಗದೆ 133 ರನ್‌ ಗಳಿಸಿದ್ದಾರೆ. ಒಟ್ಟಾರೆ ಈವರೆಗೆ ಅವರು ಆಡಿರುವ 5 ಟೆಸ್ಟ್‌ಗಳಲ್ಲಿ 603 ರನ್‌ ಕಲೆ ಹಾಕಿದ್ದಾರೆ. ಇದು ಮೊದಲ 5 ಟೆಸ್ಟ್‌ನಲ್ಲಿ ಲಂಕಾ ಪರ 2ನೇ ಗರಿಷ್ಠ. ಕಮಿಂಡು ಮೆಂಡಿಸ್‌ ತಮ್ಮ ಮೊದಲ 5 ಟೆಸ್ಟ್‌ನಲ್ಲಿ 631 ರನ್‌ ಗಳಿಸಿದ್ದರು.

ಗೆಲುವನ್ನು ಕೈಚೆಲ್ಲಿದ ಭಾರತ:

ವಿಶ್ವ ಟೆಸ್ಟ್‌ ಅಂಕದಲ್ಲಿ ಹಿನ್ನಡೆ

5ನೇ ಸ್ಥಾನದಲ್ಲೇ ಉಳಿದ ಶುಭ್‌ಮನ್‌ ಪಡೆ

ಕೊಲಂಬೊ: ಲಂಕಾ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟ ಭಾರತ ತಂಡಕ್ಕೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಹಿನ್ನಡೆ ಉಂಟಾಗಿದೆ.

ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆದು ಫೈನಲ್‌ಗೇರಲು ಭಾರತಕ್ಕೆ ಈ ಪಂದ್ಯ ಮಹತ್ವದ್ದಾಗಿತ್ತು. ಆದರೆ ಡ್ರಾ ಮಾಡಿಕೊಂಡ ಭಾರತ 5ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ತಂಡ ಆಡಿರುವ 11 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, ಶೇ.51.52 ಗೆಲುವಿನ ದಾಖಲೆ ಹೊಂದಿದೆ. ತಂಡಕ್ಕೆ ಇನ್ನು ನ್ಯೂಜಿಲೆಂಡ್‌ ವಿರುದ್ಧ 2, ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳಿವೆ. ಅದರಲ್ಲಿ ಕನಿಷ್ಠ 6 ಪಂದ್ಯಗಳಲ್ಲಿ ಭಾರತ ಗೆದ್ದರೆ ಮಾತ್ರ ಡಬ್ಲ್ಯುಟಿಸಿ ಫೈನಲ್‌ಗೇರಬಹುದು.

ಇನ್ನು, ಲಂಕಾ ತಂಡ ಆಡಿರುವ 6 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿದ್ದು, ಶೇ.33.33 ಗೆಲುವಿನ ದಾಖಲೆಯೊಂದಿಗೆ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌, ಬಾಂಗ್ಲಾದೇಶ ಕ್ರಮವಾಗಿ ಮೊದಲ 4 ಸ್ಥಾನಗಳಲ್ಲಿವೆ.

ಫಾಲೋಆನ್‌ ಬಳಿಕ

200+ ರನ್‌ ಹಿನ್ನಡೆ:

ಭಾರತ 26 ವರ್ಷಗಳ

ಅತಿ ಕಳಪೆ ಪ್ರದರ್ಶನ

ಭಾರತ ತಂಡ ಎದುರಾಳಿ ಮೇಲೆ ಫಾಲೋ ಆನ್‌ ಹೇರಿದ ಬಳಿಕ 200+ ರನ್‌ ಬಿಟ್ಟುಕೊಟ್ಟಿದ್ದು ಕಳೆದ 26 ವರ್ಷಗಳಲ್ಲಿ ಇದೇ ಮೊದಲು. ಈ ಹಿಂದೆ 2000ರಲ್ಲಿ ನಾಗ್ಪುರದಲ್ಲಿ ನಡೆದಿದ್ದ ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಭಾರತ ಈ ರೀತಿ ಕಳಪೆ ಪ್ರದರ್ಶನ ನೀಡಿತ್ತು. ಒಟ್ಟಾರೆ, ಫಾಲೋ ಆನ್‌ ಹೇರಿದ ಬಳಿಕ ಭಾರತ ಬಿಟ್ಟುಕೊಟ್ಟ 3ನೇ ಗರಿಷ್ಠ ರನ್‌ ಇದು. ಜಿಂಬಾಬ್ವೆಗೆ 276 ರನ್‌ ಬಿಟ್ಟುಕೊಟ್ಟಿದ್ದರೆ, 1961ರಲ್ಲಿ ಇಂಗ್ಲೆಂಡ್‌ಗೆ ಫಾಲೋಆನ್‌ ಬಳಿಕ 274 ರನ್‌ ಮುನ್ನಡೆ ನೀಡಿತ್ತು.

ಫಾಲೋಆನ್‌ಗೆ ತುತ್ತಾದ

ಬಳಿಕ ಲಂಕಾ ಪಂದ್ಯ ಡ್ರಾ:

16 ವರ್ಷಗಳಲ್ಲೇ ಮೊದಲು

ಲಂಕಾ ತಂಡ ಕಳೆದ 16 ವರ್ಷಗಳಲ್ಲೇ ಮೊದಲ ಬಾರಿ ಟೆಸ್ಟ್‌ನಲ್ಲಿ ಫಾಲೋಆನ್‌ಗೆ ತುತ್ತಾದ ಬಳಿಕ ಪಂದ್ಯದಲ್ಲಿ ಸೋಲದೆ ಡ್ರಾ ಮಾಡಿಕೊಂಡಿತು. ಕೊನೆ ಬಾರಿ 2010ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಗಾಲೆಯಲ್ಲಿ ನಡೆದ ಟೆಸ್ಟ್‌ನಲ್ಲಿ ಲಂಕಾ ಫಾಲೋಆನ್‌ಗೆ ತುತ್ತಾಗಿದ್ದರೂ ಬಳಿಕ ಡ್ರಾ ಮಾಡಿಕೊಂಡಿತ್ತು.

ವಿಜಯ್‌ ಹಜಾರೆ, ಪ್ಲವರ್‌

ಸಾಲಿಗೆ ಸೇರಿದ ದಿನುಶಾ

ಫಾಲೋಆನ್‌ಗೆ ತುತ್ತಾದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಆಟಗಾರರ ಪಟ್ಟಿಗೆ ಸೋನಲ್‌ ದಿನುಶಾ ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಭಾರತದ ವಿಜಯ್‌ ಹಜಾರೆ ಅವರು 1948ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಹಾಗೂ 2001ರಲ್ಲಿ ಜಿಂಬಾಬ್ವೆಯ ಆ್ಯಂಡಿ ಫ್ಲವರ್‌ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದರು.

05ನೇ ಬ್ಯಾಟರ್‌

ಟೆಸ್ಟ್‌ ಪಂದ್ಯವೊಂದರಲ್ಲಿ 6 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ 2 ಶತಕ ಸಿಡಿಸಿದ 5ನೇ ಆಟಗಾರ ಸೋನಲ್‌ ದಿನುಶಾ.

173 ರನ್‌

ದಿನುಶಾ ಅವರು ಈ ಸರಣಿಯಲ್ಲಿ ಸ್ಪಿನ್ನರ್ಸ್‌ ವಿರುದ್ಧ ಸ್ವೀಪ್‌ ಶಾಟ್‌ಗಳ ಮೂಲಕವೇ 173 ರನ್‌ ಗಳಿಸಿದ್ದಾರೆ. ಇದು ಗರಿಷ್ಠ. 2021ರಲ್ಲಿ ಲಂಕಾ ವಿರುದ್ಧ ಸರಣಿಯಲ್ಲಿ ರೂಟ್‌ 160 ರನ್‌ ಗಳಿಸಿದ್ದು ಹಿಂದಿನ ದಾಖಲೆ.