ಭಾರತ - ಇಂಗ್ಲೆಂಡ್‌ ಪಂದ್ಯದ ಟಿಕೆಟ್‌ಗೆ ನೂಕು ನುಗ್ಗಲು : ಹಲವರಿಗೆ ಗಾಯ, ಅಸ್ವಸ್ಥ!

| N/A | Published : Feb 06 2025, 12:17 AM IST / Updated: Feb 06 2025, 04:14 AM IST

ಸಾರಾಂಶ

ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಕಾಲ್ತುಳಿತ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ ಕೆಲ ಅಭಿಮಾನಿಗಳು ನೂಕುನುಗ್ಗಲಿನಿಂದ ಅಸ್ವಸ್ಥರಾಗಿದ್ದು, ಕೆಲವರು ಗಾಯಗೊಂಡಿದ್ದಾಗಿ ವರದಿಯಾಗಿದೆ.

ಕಟಕ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಫೆ.9ಕ್ಕೆ ಕಟಕ್‌ನಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯದ ಟಿಕೆಟ್‌ಗಾಗಿ ಇಲ್ಲಿನ ಬಾರಬತಿ ಕ್ರೀಡಾಂಗಣದ ಹೊರಗಡೆ ಭಾರಿ ನೂಕುನುಗ್ಗಲು ಉಂಟಾಗಿದೆ. 

ಬುಧವಾರ ಕ್ರೀಡಾಂಗಣದ ಕೌಂಟರ್‌ನಲ್ಲಿ ಆಫ್‌ಲೈನ್‌ ಮೂಲಕ ಟಿಕೆಟ್‌ ವಿತರಣೆ ನಡೆಯಲಿದೆ ಎಂದು ಘೋಷಿಸಲಾಗಿತ್ತು. 2019ರ ಬಳಿಕ ಮೊದಲ ಬಾರಿ ಈ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ, ಟಿಕೆಟ್‌ಗಾಗಿ ಮುಂಜಾನೆಯೇ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣ ಬಳಿ ನೆರೆದಿದ್ದರು. ಆದರೆ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಕಾಲ್ತುಳಿತ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ ಕೆಲ ಅಭಿಮಾನಿಗಳು ನೂಕುನುಗ್ಗಲಿನಿಂದ ಅಸ್ವಸ್ಥರಾಗಿದ್ದು, ಕೆಲವರು ಗಾಯಗೊಂಡಿದ್ದಾಗಿ ವರದಿಯಾಗಿದೆ.

ಬೂಮ್ರಾ ಆಡದಿದ್ದರೆ ಭಾರತ ಗೆಲ್ಲುವ ಸಾಧ್ಯತೆ ಕಮ್ಮಿ: ಶಾಸ್ತ್ರಿ

ದುಬೈ: ‘ಚಾಂಪಿಯನ್ಸ್‌ ಟ್ರೋಫಿಯಲ್ಲಿ ವೇಗಿ ಜಸ್‌ಪ್ರೀತ್‌ ಬೂಮ್ರಾ ಆಡಿದ್ದರೆ ಭಾರತದ ಬಲ ಕಡಿಮೆ ಆಗಲಿದ್ದು, ಗೆಲ್ಲುವ ಸಾಧ್ಯತೆ ಕ್ಷೀಣಿಸಲಿದೆ’ ಎಂದು ಭಾರತದ ಮಾಜಿ ಕೋಚ್‌ ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್‌ ಪಂದ್ಯದಲ್ಲಿ ಬೂಮ್ರಾ ಬೆನ್ನು ನೋವಿನಿಂದ ಬಳಲಿದ್ದರು. ಸದ್ಯ ಅವರು ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. 

ಫೆ.19ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಬೂಮ್ರಾ ಹೆಸರಿತ್ತು. ಆದರೆ ಅವರು ಸಂಪೂರ್ಣವಾಗಿ ಫಿಟ್ ಆಗದಿದ್ದರೆ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳಿದೆ. ಈ ಬಗ್ಗೆ ಮಾತನಾಡಿರುವ ರವಿ ಶಾಸ್ತ್ರಿ ‘ಬೂಮ್ರಾ ಫಿಟ್‌ ಆಗದಿದ್ದರೆ ಭಾರತದ ಚಾಂಪಿಯನ್ಸ್‌ ಟ್ರೋಫಿ ಗೆಲ್ಲುವ ಸಾಧ್ಯತೆ ಶೇ.30-35ರಷ್ಟು ಕಡಿಮೆಯಾಗಬಹುದು. ಅವರು ಫಿಟ್‌ ಆದರೆ ಭಾರತಕ್ಕೆ ನೆರವಾಗಲಿದೆ’ ಎಂದಿದ್ದಾರೆ.