ಸಾರಾಂಶ
ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಅಧ್ಯಕ್ಷ ಅನಿಲ್ ಜೈನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 8 ರಾಜ್ಯಗಳ ಟೆನಿಸ್ ಸಂಸ್ಥೆಗಳು ನಿರ್ಧರಿಸಿವೆ.
ಶನಿವಾರ ನವದೆಹಲಿಯಲ್ಲಿ ನಡೆಯಬೇಕಿದ್ದ ವಾರ್ಷಿಕ ಸಾಮಾನ್ಯ ಸಭೆ ಈಗ ವಿಶೇಷ ಸಾಮಾನ್ಯ ಸಭೆಯಾಗಿ ಬದಲಾಗಿದ್ದು, ಇದರಲ್ಲಿ ಅಸ್ಸಾಂ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಹರ್ಯಾಣ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು ಹಾಗೂ ತ್ರಿಪುರಾ ರಾಜ್ಯಗಳ ಟೆನಿಸ್ ಸಂಸ್ಥೆಗಳು ಜೈನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿದೆ.
ಒಂದು ವೇಳೆ ಅವಿಶ್ವಾಸ ನಿರ್ಣಯ ಪಾಸಾದರೆ ಎಐಟಿಎ ಇತಿಹಾಸದಲ್ಲೇ ಈ ರೀತಿ ಅಧಿಕಾರ ಕಳೆದುಕೊಳ್ಳಲಿರುವ ಮೊದಲ ಅಧ್ಯಕ್ಷ ಎನ್ನುವ ಅಪಖ್ಯಾತಿಗೆ ಜೈನ್ ಗುರಿಯಾಗಲಿದ್ದಾರೆ. ಆದರೆ ವಿಶೇಷ ಸಾಮಾನ್ಯ ಸಭೆ ಕಾನೂನುಬಾಹಿರ ಎಂದಿರುವ ಜೈನ್, ಸಭೆಯ ವಿರುದ್ಧ ಕಾನೂನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಏಕೆ ಅವಿಶ್ವಾಸ ನಿರ್ಣಯ?
ಬಿಜೆಪಿ ರಾಜ್ಯಸಭೆ ಸಂಸದರೂ ಆಗಿರುವ ಜೈನ್ ಎಐಟಿಎ ಅಧ್ಯಕ್ಷ ಸ್ಥಾನವನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸುತ್ತಿದ್ದಾರೆ ಎಂಬ ಆರೋಪವಿದೆ. ‘ಜೈನ್ ತಮ್ಮ ವೈಯಕ್ತಿಕ ಅಜೆಂಡಾಗಳ ಜಾರಿಗೊಳಿಸಲು ಹುದ್ದೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ಎಐಟಿಎ ಹಣದಲ್ಲೇ ತಮ್ಮ ಕುಟುಂಬದೊಂದಿಗೆ ಹಲವು ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ’ ಎಂದು ರಾಜ್ಯ ಸಂಸ್ಥೆಗಳು ಆರೋಪಿಸಿವೆ.