ವೈಫಲ್ಯ ಮುಚ್ಚಿಹಾಕಲು ಭಾರತ ಫುಟ್ಬಾಲ್‌ ಬಗ್ಗೆ ಸ್ಟಿಮಾಕ್‌ ಆರೋಪ: ಎಐಎಫ್‌ಎಫ್‌ ಕೆಂಡ

| Published : Jun 25 2024, 12:39 AM IST / Updated: Jun 25 2024, 04:09 AM IST

ವೈಫಲ್ಯ ಮುಚ್ಚಿಹಾಕಲು ಭಾರತ ಫುಟ್ಬಾಲ್‌ ಬಗ್ಗೆ ಸ್ಟಿಮಾಕ್‌ ಆರೋಪ: ಎಐಎಫ್‌ಎಫ್‌ ಕೆಂಡ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ವೈಫಲ್ಯದ ಹೊಣೆ ಹೊತ್ತುಕೊಳ್ಳುವ ಬದಲು ಇಡೀ ಫುಟ್ಬಾಲ್‌ ವ್ಯವಸ್ಥೆಯನ್ನೇ ದೂರುತ್ತಿದ್ದಾರೆ. ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೂ ವೈದ್ಯಕೀಯ ವಿವರ ಮುಚ್ಚಿಟ್ಟು ಕೋಚ್‌ ಆಗಿ ಮುಂದುವರಿದಿದ್ದರು ಎಂದು ಎಐಎಫ್‌ಎಫ್‌ ದೂರಿದೆ.

ನವದೆಹಲಿ: ಭಾರತ ಫುಟ್ಬಾಲ್‌ ತಂಡದ ಮುಖ್ಯ ಕೋಚ್‌ ಸ್ಥಾನದಿಂದ ಇಗೊರ್ ಸ್ಟಿಮಾಕ್‌ರನ್ನು ವಜಾಗೊಳಿಸಿದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಭಾರತ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌), ಸ್ಟಿಮಾಕ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಫುಟ್ಬಾಲ್‌ಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. 

ಅಲ್ಲದೆ, ತಮ್ಮ ವೈಫಲ್ಯದ ಹೊಣೆ ಹೊತ್ತುಕೊಳ್ಳುವ ಬದಲು ಇಡೀ ಫುಟ್ಬಾಲ್‌ ವ್ಯವಸ್ಥೆಯನ್ನೇ ದೂರುತ್ತಿದ್ದಾರೆ ಎಂದು ಕೆಂಡಕಾರಿದೆ.ಈ ಬಗ್ಗೆ ಸೋಮವಾರ ದೀರ್ಘ ಪ್ರಕಟಣೆ ಹೊರಡಿಸಿರುವ ಎಐಎಫ್‌ಎಫ್‌, ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಸ್ಟಿಮಾಕ್‌ ಭಾರತದ ಫುಟ್ಬಾಲ್‌ ವ್ಯವಸ್ಥೆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರ ಇತ್ತೀಚಿನ ಹೇಳಿಕೆಗಳು ಅವರ ವೃತ್ತಿಗೆ ಸೂಕ್ತವಲ್ಲ ಎಂದಿದೆ.

 ‘ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ಸ್ಟಿಮಾಕ್‌ ಹೇಳಿಕೆ ಆಘಾತಕಾರಿ. ಅವರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೂ ವೈದ್ಯಕೀಯ ವಿವರ ಮುಚ್ಚಿಟ್ಟು ಕೋಚ್‌ ಆಗಿ ಮುಂದುವರಿದಿದ್ದರು’ ಎಂದು ಆರೋಪಿಸಿದೆ.

ಅಲ್ಲದೆ, ಆಟಗಾರರ ಆಯ್ಕೆಗೆ ಜ್ಯೋತಿಷಿಯ ಮೊರೆ ಹೋಗಿದ್ದ ಬಗ್ಗೆಯೂ ಸ್ಟಿಮಾಕ್‌ ವಿರುದ್ಧ ಎಐಎಫ್ಎಫ್‌ ಟೀಕೆ ವ್ಯಕ್ತಪಡಿಸಿದೆ. ಫಿಫಾ ಅರ್ಹತಾ ಟೂರ್ನಿಯ ಮಹತ್ವದ ಪಂದ್ಯಕ್ಕೂ ಮುನ್ನ ಸ್ಟಿಮಾಕ್‌ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿಲ್ಲ. ಅವರಿಗೆ ಎಲ್ಲಾ ಬೆಂಬಲ ನೀಡಿದ ಹೊರತಾಗಿಯೂ ತಮ್ಮ ಹುದ್ದೆಗೆ ಘನತೆ ತರಲು ವಿಫಲರಾದರು ಎಂದು ಕಿಡಿಕಾರಿದೆ.

 2019ರಿಂದಲೂ ಭಾರತದ ಕೋಚ್‌ ಆಗಿದ್ದ ಕ್ರೊವೇಷಿಯಾದ ಸ್ಟಿಮಾಕ್‌ರನ್ನು ಇತ್ತೀಚೆಗಷ್ಟೇ ವಜಾಗೊಳಿಸಲಾಗಿತ್ತು. ಬಳಿಕ ಸ್ಟಿಮಾಕ್‌ ಎಐಎಫ್‌ಎಫ್‌ ವಿರುದ್ಧ ಬಹಿರಂಗವಾಗಿ ಟೀಕೆ ವ್ಯಕ್ತಪಡಿಸಿದ್ದರು.