ಸಾರಾಂಶ
ಬೆಂಗಳೂರು : ಸಬ್ ಜೂನಿಯರ್ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ಫೈನಲ್ ಪ್ರವೇಶಿಸಿದೆ. ಶುಕ್ರವಾರ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಡೆಲ್ಲಿ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರಾಜ್ಯ ತಂಡಕ್ಕೆ 5-3 ಗೋಲುಗಳ ಗೆಲುವು ಲಭಿಸಿತು. ಆಯುಶ್ ಕೊಠಾರಿ 33 ಮತ್ತು 44ನೇ ನಿಮಿಷದಲ್ಲಿ ಗೋಲು ಬಾರಿಸಿ ರಾಜ್ಯಕ್ಕೆ ಮುನ್ನಡೆ ಒದಗಿಸಿದರೆ, ಅರವಿಂದ್ 58 ಮತ್ತು 73ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ರಾಜ್ಯದ ಗೆಲುವಿನ ಅಂತರ ಹೆಚ್ಚಿಸಿದರು. ಮತ್ತೊಂದು ಗೋಲು 65ನೇ ನಿಮಿಷದಲ್ಲಿ ಸಿಎಚ್ ಸಾಕಿಪ್ ಹೊಡೆದರು. ಡೆಲ್ಲಿ 80 ಮತ್ತು 84ನೇ ನಿಮಿಷಗಳಲ್ಲಿ 2 ಗೋಲು ಬಾರಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ ಈಗ ಎ ಮತ್ತು ಸಿ ಗುಂಪಿನ ತಂಡಗಳ ನಡುವೆ ಮಾತ್ರ ಪಂದ್ಯಗಳು ನಡೆದಿವೆ. ಬಿ ಮತ್ತು ಡಿ ಗುಂಪಿನ ಪಂದ್ಯಗಳು ಶನಿವಾರದಿಂದ ಆರಂಭಗೊಳ್ಳಲಿವೆ. ಸೆ.22ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ಭಾರತ vs ಸ್ವೀಡನ್ ಇಂದು, ನಾಳೆ ಡೇವಿಸ್ ಕಪ್ ಟೆನಿಸ್ ಪಂದ್ಯ
ಸ್ಟಾಕ್‌ಹೋಮ್(ಸ್ವೀಡನ್): ಭಾರತ ಹಾಗೂ ಸ್ವೀಡನ್ ತಂಡಗಳು ಡೇವಿಸ್ ಕಪ್ ಟೆನಿಸ್ ಟೂರ್ನಿಯ ವಿಶ್ವ ಗುಂಪು 1ರ ಪಂದ್ಯದಲ್ಲಿ ಶನಿವಾರ ಹಾಗೂ ಭಾನುವಾರ ಪರಸ್ಪರ ಮುಖಾಮುಖಿಯಾಗಲಿವೆ. ಭಾರತ ತಂಡ ಸ್ವೀಡನ್ ವಿರುದ್ಧ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ. ಶನಿವಾರ ಆರಂಭಿಕ ಸಿಂಗಲ್ಸ್ ಪಂದ್ಯದಲ್ಲಿ ಶ್ರೀರಾಮ್ ಬಾಲಾಜಿ ಸ್ವೀಡನ್‌ನ ನಂ.1 ಆಟಗಾರ ಎಲಿಯಾಸ್ ಯೆಮೆರ್ ವಿರುದ್ಧ ಆಡಲಿದ್ದಾರೆ. 2ನೇ ಸಿಂಗಲ್ಸ್‌ನಲ್ಲಿ ಭಾರತದ ನಂ.1 ರಾಮ್‌ಕುಮಾರ್ ರಾಮನಾಥನ್‌ಗೆ ಲಿಯೋ ಬೊರ್ಗ್ ಸವಾಲು ಎದುರಾಗಲಿದೆ. ಬಳಿಕ ಭಾನುವಾರ ಶ್ರೀರಾಮ್-ರಾಮ್‌ಕುಮಾರ್ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದು, ಮೊದಲ ರಿವರ್ಸ್ ಸಿಂಗಲ್ಸ್‌ನಲ್ಲಿ ಶ್ರೀರಾಮ್, 2ನೇ ಪಂದ್ಯದಲ್ಲಿ ರಾಮ್‌ಕುಮಾರ್ ಆಡಲಿದ್ದಾರೆ.