ಪುರುಷರ ಜಾವೆಲಿನ್‌ ಎಸೆತ : ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ 2ನೇ ಬಂಗಾರ ಗೆದ್ದು ಮಿನುಗಿದ ಸುಮಿತ್‌

| Published : Sep 04 2024, 01:49 AM IST / Updated: Sep 04 2024, 04:44 AM IST

ಸಾರಾಂಶ

ಪುರುಷರ ಜಾವೆಲಿನ್‌ ಎಸೆತ ಎಫ್‌-64 ವಿಭಾಗದಲ್ಲಿ ಚಿನ್ನ. ಸತತ 2ನೇ ಪ್ಯಾರಾಲಿಂಪಿಕ್ಸಲ್ಲೂ ಬಂಗಾರ ಗೆದ್ದ ಸಾಧನೆ. ಈ ಬಾರಿ ಭಾರತಕ್ಕೆ 3ನೇ ಚಿನ್ನದ ಪದಕ

ಪ್ಯಾರಿಸ್‌: ಈ ಬಾರಿ ಭಾರತಕ್ಕೆ 3ನೇ ಚಿನ್ನದ ಪದಕ ಲಭಿಸಿದೆ. ಪದಕ ತಂದುಕೊಟ್ಟಿದ್ದು ಗೋಲ್ಡನ್‌ ಬಾಯ್ ಸುಮಿತ್‌ ಅಂತಿಲ್‌. ಸೋಮವಾರ ರಾತ್ರಿ ಅವರು ಪುರುಷರ ಜಾವೆಲಿನ್‌ ಎಸೆತದ ಎಫ್‌-64 ವಿಭಾಗದಲ್ಲಿ 70.59 ಮೀ. ದೂರ ದಾಖಲಿಸಿ ಚಿನ್ನ ಸಂಪಾದಿಸಿದರು. ಈ ಮೂಲಕ ಸತತ 2ನೇ ಪ್ಯಾರಾಲಿಂಪಿಕ್ಸ್‌ನಲ್ಲೂ ಬಂಗಾರ ಗೆದ್ದ ಸಾಧನೆ ಮಾಡಿದರು.

ಈ ಬಾರಿ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿದ್ದ 26 ವರ್ಷದ ಸುಮಿತ್‌, ಚಿನ್ನ ಗೆಲ್ಲುವ ಫೇವರಿಟ್‌ ಎಂದೇ ಕರೆಸಿಕೊಳ್ಳುತ್ತಿದ್ದರು. ತಮ್ಮ ಮೇಲಿದ್ದ ಭಾರತೀಯರ ನಿರೀಕ್ಷೆಯನ್ನು ಸುಮಿತ್‌ ಹುಸಿಗೊಳಿಸಲಿಲ್ಲ. ಮೊದಲ ಪ್ರಯತ್ನದಲ್ಲಿ 69.11 ಮೀ. ದೂರಕ್ಕೆ ಜಾವೆಲಿನ್‌ ಎಸೆದ ಸುಮಿತ್‌, 2ನೇ ಪ್ರಯತ್ನದಲ್ಲಿ 70.59 ಮೀ. ದೂರಕ್ಕೆಸೆದು ಅಗ್ರಸ್ಥಾನಕ್ಕೇರಿದರು. 3ನೇ ಪ್ರಯತ್ನದಲ್ಲಿ 66.66 ಮೀ., 4ನೇ ಪ್ರಯತ್ನ ಫೌಲ್ ಆಯಿತು. ಬಳಿಕ 5 ಮತ್ತು 6ನೇ ಪ್ರಯತ್ನದಲ್ಲಿ ಕ್ರಮವಾಗಿ 69.04 ಮೀ. ಮತ್ತು 66.57 ದೂರಕ್ಕೆಸೆದರು.ಶ್ರೀಲಂಕಾದ ಡುಲಾನ್‌(67.03 ಮೀ.) ಬೆಳ್ಳಿ, ಆಸ್ಟ್ರೇಲಿಯಾದ ಮೈಕಲ್‌ ಬ್ಯುರಿಯನ್‌ (64.89 ಮೀ.) ಕಂಚು ಜಯಿಸಿದರು. ಭಾರತದ ಸಂದೀಪ್‌ 62.80 ಮೀ. ದಾಖಲಿಸಿ 4ನೇ, ಸಂಜಯ್ 58.03 ಮೀಟರ್‌ನೊಂದಿಗೆ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಮೊದಲ ಎಸೆತದಲ್ಲೇ ದಾಖಲೆ ಪತನ

ಸುಮಿತ್‌ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 68.55 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಚಿನ್ನ ಗೆದ್ದಿದ್ದರು. ಅದು ಈ ವರೆಗೂ ದಾಖಲೆಯಾಗಿತ್ತು. ಸೋಮವಾರ ಸುಮಿತ್‌ ಮೊದಲ ಪ್ರಯತ್ನದಲ್ಲೇ 69.11 ಮೀ. ದೂರ ದಾಖಲಿಸಿ, ತಮ್ಮದೇ ಹೆಸರಲ್ಲಿದ್ದ ಪ್ಯಾರಾಲಿಂಪಿಕ್ಸ್‌ ದಾಖಲೆಯನ್ನು ಉತ್ತಮಗೊಳಿಸಿದರು. ಈ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಕೂಡಾ ಸುಮಿತ್‌ ಹೆಸರಲ್ಲಿದೆ. ಕಳೆದ ಏಷ್ಯನ್‌ ಗೇಮ್ಸ್‌ನಲ್ಲಿ ಅವರು 73.29 ಮೀ. ದೂರಕ್ಕೆಸೆದಿದ್ದರು.

03ನೇ ಅಥ್ಲೀಟ್: ಸುಮಿತ್‌ ಪ್ಯಾರಾಲಿಂಪಿಕ್ಸ್‌ನಲ್ಲಿ 2 ಚಿನ್ನ ಗೆದ್ದ ಭಾರತದ 3ನೇ ಕ್ರೀಡಾಪಟು. ದೇವೇಂದ್ರ ಝಝಾರಿಯಾ, ಅವನಿ ಲೇಖರಾ ಇತರ ಸಾಧಕರು.

ಕುಸ್ತಿಯಲ್ಲಿ ಒಲವು, ಸೈನ್ಯಕ್ಕೆ ಸೇರುವ ಗುರಿ: ಆಗಿದ್ದೇ ಬೇರೆ!

ಹರ್ಯಾಣದ ಸೋನೆಪತ್‌ನವಾರದ ಸುಮಿತ್‌ರ ತಂದೆ ಸೈನ್ಯದಲ್ಲಿದ್ದರು. ತಂದೆಯತೆ ತಾವೂ ಸೈನಿಕರಾಗಬೇಕೆಂದು ಬಯಸಿದ್ದರು ಸುಮಿತ್‌. ಯೋಗೇಶ್ವರ್‌ ದತ್‌ರಂತೆ ಯಶಸ್ವಿ ಕುಸ್ತಿಪಟು ಆಗುವ ಕನಸನ್ನೂ ಕಂಡಿದ್ದರು. ಆದರೆ 2015ರಲ್ಲಿ ಸಂಭವಿಸಿದ ಬೈಕ್‌ ಅಪಘಾತದಲ್ಲಿ ಒಂದು ಕಾಲನ್ನೇ ಕಳೆದುಕೊಂಡ ಸುಮಿತ್‌ರ ಬದುಕಿನಲ್ಲಿ ದೊಡ್ಡ ತಿರುವು ಎದುರಾಯಿತು. ಬಯಸಿದ್ದನ್ನು ಸಾಧಿಸಲಾಗದಿದ್ದರೂ ಸುಮಿತ್‌ ಸುಮ್ಮನೆ ಕೂರಲಿಲ್ಲ. 2017ರಲ್ಲಿ ಕೃತಕ ಕಾಲಿನೊಂದಿಗೆ ಪ್ಯಾರಾ ಅಥ್ಲೆಟಿಕ್ಸ್‌ ಕಡೆ ಬಂದ ಅವರು ಬಳಿಕ ಮುಟ್ಟಿದ್ದೆಲ್ಲಾ ಚಿನ್ನ. ಪ್ಯಾರಾಲಿಂಪಿಕ್ಸ್‌ನಲ್ಲಿ 2 ಚಿನ್ನ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಹಾಗೂ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲೂ 1 ಚಿನ್ನ ಗೆದ್ದಿದ್ದಾರೆ.

ಏನಿದು ಎಫ್‌64?

ಕಾಲಿನಲ್ಲಿ ನ್ಯೂನ್ಯತೆ ಹೊಂದಿರುವ ಅಥ್ಲೀಟ್‌ಗಳು ಸ್ಪರ್ಧಿಸುವ ವಿಭಾಗ. ಕಾಲಿಗೆ ಕೈತಕ ಕಾಲನ್ನು ಜೋಡಿಸಿ ಅದರ ನೆರವಿನಿಂದ ಸ್ಪರ್ಧೆಗೆ ಇಳಿಯಬಹುದಾಗಿದೆ.