ಸಾರಾಂಶ
ಕೋಲ್ಕತಾ: ಭಾರತದ ದಿಗ್ಗಜ ಫುಟ್ಬಾಲಿಗ, ಗರಿಷ್ಠ ಗೋಲು ಗಳಿಕೆಯಲ್ಲಿ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರ ಸಾಲಿನಲ್ಲಿ ನಿಲ್ಲುವ ಸುನಿಲ್ ಚೆಟ್ರಿ ಗುರುವಾರ ಕೊನೆಯ ಬಾರಿ ಭಾರತದ ಜೆರ್ಸಿ ತೊಟ್ಟು ಆಡಲಿದ್ದಾರೆ. ಕುವೈತ್ ವಿರುದ್ಧ ಫಿಫಾ ಫುಟ್ಬಾಲ್ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಚೆಟ್ರಿ ಕಣಕ್ಕಿಳಿಯಲಿದ್ದು, ಇದು ಭಾರತದ ಪರ ಅವರಿಗೆ ಕೊನೆಯ ಪಂದ್ಯವಾಗಲಿದೆ.39 ವರ್ಷ ಚೆಟ್ರಿ ಇತ್ತೀಚೆಗಷ್ಟೇ ಅಂ.ರಾ. ಫುಟ್ಬಾಲ್‌ಗೆ ನಿವೃತ್ತಿ ಪ್ರಕಟಿಸಿದ್ದರು. 2005ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಚೆಟ್ರಿ ಈ ವರೆಗೂ 150 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 94 ಗೋಲು ಬಾರಿಸಿದ್ದಾರೆ. ವಿಶ್ವದ ಗರಿಷ್ಠ ಗೋಲು ಸರದಾರರ ಪಟ್ಟಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ(128), ಇರಾನ್ ಅಲಿ ಡೇಯ್ (108), ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ(106) ಬಳಿಕ 4ನೇ ಸ್ಥಾನದಲ್ಲಿದ್ದಾರೆ. ಈ ವರೆಗೂ ಭಾರತಕ್ಕೆ ಹಲವು ಬಾರಿ ಸ್ಯಾಫ್ ಚಾಂಪಿಯನ್‌ಶಿಪ್, ನೆಹರೂ ಕಪ್ ಗೆಲ್ಲಿಸಿಕೊಟ್ಟಿರುವ ಚೆಟ್ರಿ, ಸದ್ಯ ಕುವೈತ್ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಭಾರತವನ್ನು ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯ 3ನೇ ಸುತ್ತಿಗೇರಿಸುವ ನಿರೀಕ್ಷೆಯಲ್ಲಿದ್ದಾರೆ.
ಭಾರತ-ಕುವೈತ್ ಫಿಫಾ ಅರ್ಹತಾ ಪಂದ್ಯಕೋಲ್ಕತಾ: 2026ರ ಫಿಫಾ ಫುಟ್ಬಾಲ್ ವಿಶ್ವಕಪ್‌ನ 2ನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ ಭಾರತಕ್ಕೆ ಗುರುವಾರ ಕುವೈತ್ ಸವಾಲು ಎದುರಾಗಲಿದೆ. ಈ ಪಂದ್ಯ ಭಾರತಕ್ಕೆ ನಿರ್ಣಾಯಕ ಎನಿಸಿದ್ದು, ಗೆದ್ದರೆ ಚೊಚ್ಚಲ ಬಾರಿ ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯ 3ನೇ ಸುತ್ತು ಪ್ರವೇಶಿಸಲಿದೆ.ಸದ್ಯ ಟೂರ್ನಿಯಲ್ಲಿ ಭಾರತ 4 ಪಂದ್ಯಗಳನ್ನಾಡಿದ್ದು, 1 ಜಯ, 1 ಡ್ರಾ, 2 ಸೋಲಿನೊಂದಿಗೆ 4 ಅಂಕ ಸಂಪಾದಿಸಿ ‘ಎ’ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕತಾರ್ (12 ಅಂಕ) ಅಗ್ರಸ್ಥಾನ, ಅಫ್ಘಾನಿಸ್ತಾನ(4 ಅಂಕ), ಕುವೈತ್(3 ಅಂಕ) ಕ್ರಮವಾಗಿ 3, 4ನೇ ಸ್ಥಾನಗಳಲ್ಲಿವೆ. ಕಳೆದ ನವೆಂಬರ್‌ನಲ್ಲಿ ಕುವೈತ್ ವಿರುದ್ಧ ಮೊದಲ ಮುಖಾಮುಖಿಯಲ್ಲಿ 1-0 ಗೋಲಿನಿಂದ ಗೆದ್ದಿದ್ದ ಭಾರತ ತವರಿನಲ್ಲಿ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಖಚಿತಪಡಿಸಿಕೊಳ್ಳಲಿದ್ದು, ಸೋತರೆ ಬಹುತೇಕ ಹೊರಬೀಳಲಿದೆ.ಪಂದ್ಯ ಆರಂಭ: ಸಂಜೆ 7ಕ್ಕೆ, ಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್ 18 ಚಾನೆಲ್.