ಸನ್‌ರೈಸರ್ಸ್‌ 277 ರನ್‌: ಐಪಿಎಲ್‌ನಲ್ಲಿ ಹೊಸ ದಾಖಲೆ!

| Published : Mar 28 2024, 12:48 AM IST / Updated: Mar 28 2024, 09:09 AM IST

ಸಾರಾಂಶ

ಮುಂಬೈ ಇಂಡಿಯನ್ಸ್‌ ಬೌಲರ್‌ಗಳನ್ನು ಚೆಂಡಾಡಿದ ಸನ್‌ರೈಸರ್ಸ್‌ ಹೈದರಾಬಾದ್‌. 277 ರನ್‌ ಸಿಡಿಸಿ ಐಪಿಎಲ್‌ ಇತಿಹಾಸದಲ್ಲೇ ಅತಿದೊಡ್ಡ ಮೊತ್ತ ದಾಖಲಿಸಿದ ಸನ್‌ರೈಸರ್ಸ್‌. ಆರ್‌ಸಿಬಿಯ 263 ರನ್‌ ದಾಖಲೆ ಪುಡಿ ಪುಡಿ.

ಹೈದರಾಬಾದ್‌: ಐಪಿಎಲ್ ಇನ್ನಿಂಗ್ಸ್‌ನಲ್ಲಿ ಗರಿಷ್ಠ ರನ್‌ ಕಲೆಹಾಕಿದ ದಾಖಲೆಯನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಬರೆದಿದೆ. ಬುಧವಾರ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್‌ 20 ಓವರಲ್ಲಿ 3 ವಿಕೆಟ್‌ ನಷ್ಟಕ್ಕೆ 277 ರನ್‌ ಸಿಡಿಸಿತು. ಈ ಮೂಲಕ ಆರ್‌ಸಿಬಿ ಹೆಸರಿನಲ್ಲಿದ್ದ 263 ರನ್‌ ದಾಖಲೆಯನ್ನು ಸನ್‌ರೈಸರ್ಸ್‌ ಪುಡಿಗುಟ್ಟಿತು.

2013ರಲ್ಲಿ ಆರ್‌ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪುಣೆ ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ಗೆ 263 ರನ್‌ ಕಲೆಹಾಕಿತ್ತು. ಆ ಪಂದ್ಯದಲ್ಲಿ ಕ್ರಿಸ್‌ ಗೇಲ್‌ 175 ರನ್‌ ಸಿಡಿಸಿದ್ದರು. 

ಬುಧವಾರ, ಮುಂಬೈ ಬೌಲರ್‌ಗಳನ್ನು ಚೆಂಡಾಡಿದ ಸನ್‌ರೈಸರ್ಸ್‌ ಮೊದಲ 6 ಓವರಲ್ಲಿ 1 ವಿಕೆಟ್‌ಗೆ 81 ರನ್‌ ಪೇರಿಸಿತು. 7ನೇ ಓವರಲ್ಲೇ 100 ರನ್‌ ತಲುಪಿದ ತಂಡ, 10 ಓವರಲ್ಲಿ 148 ರನ್‌ ಕಲೆಹಾಕಿ, ಐಪಿಎಲ್‌ ಪಂದ್ಯದ ಮೊದಲ 10 ಓವರಲ್ಲಿ ಅತಿಹೆಚ್ಚು ರನ್‌ ಗಳಿಸಿದ ದಾಖಲೆ ಬರೆಯಿತು.

ಹೈನ್ರಿಕ್‌ ಕ್ಲಾಸೆನ್‌ 34 ಎಸೆತದಲ್ಲಿ ಔಟಾಗದೆ 80, ಅಭಿಷೇಕ್‌ ಶರ್ಮಾ 23 ಎಸೆತದಲ್ಲಿ 63, ಟ್ರ್ಯಾವಿಸ್ ಹೆಡ್‌ 24 ಎಸೆತದಲ್ಲಿ 62, ಏಡನ್‌ ಮಾರ್ಕ್‌ರಮ್‌ 28 ಎಸೆತದಲ್ಲಿ ಔಟಾಗದೆ 42 ರನ್ ಚಚ್ಚಿದರು. ಸನ್‌ರೈಸರ್ಸ್‌ನ ಇನ್ನಿಂಗ್ಸಲ್ಲಿ 19 ಬೌಂಡರಿ, 18 ಸಿಕ್ಸರ್‌ಗಳಿದ್ದವು.

ಲೀಗ್‌ನಲ್ಲೂ ಗರಿಷ್ಠ ರನ್‌!

ಸನ್‌ರೈಸರ್ಸ್‌ನ 277 ರನ್‌ ಫ್ರಾಂಚೈಸಿ ಟಿ20 ಲೀಗ್‌ನಲ್ಲೂ ಗರಿಷ್ಠ ರನ್‌ ದಾಖಲೆ ಎನಿಸಿದೆ. 2022ರಲ್ಲಿ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಮೆಲ್ಬರ್ನ್‌ ಸ್ಟಾರ್ಸ್‌ ತಂಡ ಹೊಬಾರ್ಟ್‌ ಹರಿಕೇನ್ಸ್‌ ವಿರುದ್ಧ 2 ವಿಕೆಟ್‌ಗೆ 273 ರನ್‌ ಗಳಿಸಿದ್ದು ಈ ಹಿಂದಿನ ದಾಖಲೆ ಎನಿಸಿತ್ತು. 2022ರ ದ.ಆಫ್ರಿಕಾ ಟಿ20 ಲೀಗ್‌ನಲ್ಲಿ ನೈಟ್ಸ್‌ ವಿರುದ್ಧ ಟೈಟಾನ್ಸ್‌ 3 ವಿಕೆಟ್‌ಗೆ 271 ರನ್‌ ಕಲೆಹಾಕಿತ್ತು.

ಟಿ20 ಕ್ರಿಕೆಟ್‌ನಲ್ಲಿ4ನೇ ಗರಿಷ್ಠ ಮೊತ್ತ!

ಸನ್‌ರೈಸರ್ಸ್‌ನ 277 ರನ್‌ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 4ನೇ ಗರಿಷ್ಠ ಮೊತ್ತ. ಟಿ20 ಕ್ರಿಕೆಟ್‌ನ ಅಗ್ರ-5 ಗರಿಷ್ಠ ಮೊತ್ತಗಳ ಪಟ್ಟಿ ಇಲ್ಲಿದೆ.

ನೇಪಾಳ 314/3 ಮಂಗೋಲಿಯಾ 2023

ಆಫ್ಘನ್‌ 278/3 ಐರ್ಲೆಂಡ್‌ 2019

ಚೆಕ್‌ ಗಣರಾಜ್ಯ 278/4 ಟರ್ಕಿ 2019

ಸನ್‌ರೈಸರ್ಸ್‌ 277/3 ಮುಂಬೈ 2024

ಪಂಜಾಬ್‌ 275/6 ಆಂಧ್ರ 2023