ಸನ್‌ರೈಸರ್ಸ್‌ 277, ಮುಂಬೈ 246: ಒಟ್ಟು 523 ರನ್‌!

| Published : Mar 28 2024, 01:35 AM IST / Updated: Mar 28 2024, 09:07 AM IST

MI srh

ಸಾರಾಂಶ

ಸನ್‌ರೈಸರ್ಸ್‌ ಹೈದರಾಬಾದ್‌-ಮುಂಬೈ ಇಂಡಿಯನ್ಸ್‌ ಪಂದ್ಯದಲ್ಲಿ ಟಿ20 ದಾಖಲೆಗಳು ಉಡೀಸ್‌. ಒಂದೇ ಪಂದ್ಯದಲ್ಲಿ 523 ರನ್‌. ಟಿ20 ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿಹೆಚ್ಚು ರನ್‌ ದಾಖಲು. ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ 500ಕ್ಕೂ ಹೆಚ್ಚು ರನ್‌ ದಾಖಲು.

ಹೈದರಾಬಾದ್‌: ಎಂತೆಂಥಾ ಮಹಾನ್‌ ದಾಖಲೆಗಳಿಗೆ ವೇದಿಕೆಯಾಗಿರುವ ಐಪಿಎಲ್‌ನಲ್ಲಿ ಬುಧವಾರ ಮತ್ತೊಂದಷ್ಟು ವಿಶೇಷ, ಅಪರೂಪದ ದಾಖಲೆಗಳು ಸೃಷ್ಟಿಯಾದವು. ಸನ್‌ರೈಸರ್ಸ್‌ ಹೈದರಾಬಾದ್‌ ತನ್ನ ಇನ್ನಿಂಗ್ಸ್‌ನಲ್ಲಿ 277 ರನ್‌ ಸಿಡಿಸಿ, ಐಪಿಎಲ್‌ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತ ಗಳಿಸಿದ ತಂಡ ಎನ್ನುವ ದಾಖಲೆ ಬರೆದರೆ, ಅಮೋಘ ಹೋರಾಟ ಪ್ರದರ್ಶಿಸಿದ ಮುಂಬೈ ಇಂಡಿಯನ್ಸ್‌ 246 ರನ್‌ ಸಿಡಿಸಿ, ಟಿ20 ಪಂದ್ಯವೊಂದರಲ್ಲಿ ಅತಿಹೆಚ್ಚು ಮೊತ್ತ ದಾಖಲಾಗಲು ಕಾರಣವಾಯಿತು. 

ಮುಂಬೈ 31 ರನ್‌ ಸೋಲು ಅನುಭವಿಸಿದರೂ, ತಂಡ ತೋರಿದ ಹೋರಾಟ ಕ್ರಿಕೆಟ್‌ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಇಡೀ ಪಂದ್ಯದಲ್ಲಿ ಒಟ್ಟು 523 ರನ್‌ ದಾಖಲಾಯಿತು.

ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ 500ಕ್ಕಿಂತ ಹೆಚ್ಚು ರನ್ ದಾಖಲಾದರೆ, ಟಿ20 ಕ್ರಿಕೆಟ್‌ನಲ್ಲಿ ಈ ಮೈಲಿಗಲ್ಲು ತಲುಪಿದ್ದು 5ನೇ ಬಾರಿ. ಆದರೆ ಈ ಹಿಂದಿನ ದ.ಆಫ್ರಿಕಾ-ವಿಂಡೀಸ್‌ ಪಂದ್ಯದಲ್ಲಿ ದಾಖಲಾಗಿದ್ದ 517 ರನ್‌ ದಾಖಲೆ ಪತನಗೊಂಡಿತು. 

ಮೊದಲು ಬ್ಯಾಟ್‌ ಮಾಡಿದ ಸನ್‌ರೈಸರ್ಸ್‌, ಮೊದಲ 6 ಓವರಲ್ಲಿ 1 ವಿಕೆಟ್‌ಗೆ 81 ರನ್‌ ಪೇರಿಸಿತು. 7ನೇ ಓವರಲ್ಲೇ 100 ರನ್‌ ತಲುಪಿದ ತಂಡ, 10 ಓವರಲ್ಲಿ 148 ರನ್‌ ಕಲೆಹಾಕಿ, ಐಪಿಎಲ್‌ ಪಂದ್ಯದ ಮೊದಲ 10 ಓವರಲ್ಲಿ ಅತಿಹೆಚ್ಚು ರನ್‌ ಗಳಿಸಿದ ದಾಖಲೆ ಬರೆಯಿತು. 

ಕೊನೆಯ 10 ಓವರಲ್ಲಿ 129 ರನ್‌ ಚಚ್ಚಿತು. ಹೈನ್ರಿಕ್‌ ಕ್ಲಾಸೆನ್‌ 34 ಎಸೆತದಲ್ಲಿ ಔಟಾಗದೆ 80, ಅಭಿಷೇಕ್‌ ಶರ್ಮಾ 23 ಎಸೆತದಲ್ಲಿ 63, ಟ್ರ್ಯಾವಿಸ್ ಹೆಡ್‌ 24 ಎಸೆತದಲ್ಲಿ 62, ಏಡನ್‌ ಮಾರ್ಕ್‌ರಮ್‌ 28 ಎಸೆತದಲ್ಲಿ ಔಟಾಗದೆ 42 ರನ್ ಚಚ್ಚಿದರು. 

ಸನ್‌ರೈಸರ್ಸ್‌ನ ಇನ್ನಿಂಗ್ಸಲ್ಲಿ 19 ಬೌಂಡರಿ, 18 ಸಿಕ್ಸರ್‌ಗಳಿದ್ದವು. ನಾಯಕ ಹಾರ್ದಿಕ್‌ ಬೌಲರ್‌ಗಳ ನಿರ್ವಹಣೆ ಮಾಡಿದ ರೀತಿ ಹಲವು ಪ್ರಶ್ನೆಗಳು ಮೂಡುವಂತೆ ಮಾಡಿತು. ಟ್ರಂಪ್‌ಕಾರ್ಡ್‌ ಬೂಮ್ರಾರನ್ನು ಸರಿಯಾಗಿ ಬಳಸಿಕೊಳ್ಳದೆ ಪಾಂಡ್ಯ ಬೆಲೆ ತೆತ್ತರು. 

ಮುಂಬೈ ಸಿಡಿಲಬ್ಬರ: ಬೃಹತ್‌ ಗುರಿ ಬೆನ್ನತ್ತಿದ ಮುಂಬೈ ಏನೂ ಹಿಂದೆ ಬೀಳಲಿಲ್ಲ. ರೋಹಿತ್‌, ಕಿಶನ್‌ ಮೊದಲ 3 ಓವರಲ್ಲೇ 50 ರನ್‌ ಚಚ್ಚಿದರು. ಇವರಿಬ್ಬರು ಔಟಾದ ಮೇಲೂ ಮುಂಬೈ ಅಬ್ಬರ ನಿಲ್ಲಲಿಲ್ಲ. ತಿಲಕ್‌ ವರ್ಮಾ, ನಮನ್‌ ಧಿರ್‌ ಹೋರಾಟ ಮುಂದುವರಿಸಿದರು. 

10 ಓವರಲ್ಲಿ 141 ರನ್‌ ಸಿಡಿಸಿತು. ನಮನ್‌ (30), ತಿಲಕ್‌ (64) ಔಟಾದ ಬಳಿಕ ಹಾರ್ದಿಕ್‌ ರನ್‌ ಗಳಿಕೆಯನ್ನು ಸ್ವಲ್ಪ ಎಡವಟ್ಟು ಮಾಡಿದರು. 24 ರನ್‌ ಗಳಿಸಲು 20 ಎಸೆತಗಳನ್ನು ತೆಗೆದುಕೊಂಡಿದ್ದು, ತಂಡಕ್ಕೆ ಹಿನ್ನಡೆ ಉಂಟು ಮಾಡಿತು. ಟಿಮ್‌ ಡೇವಿಡ್‌ ಔಟಾಗದೆ 42 ರನ್‌ ಸಿಡಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. 

ಸ್ಕೋರ್‌: ಸನ್‌ರೈಸರ್ಸ್‌ 20 ಓವರಲ್ಲಿ 277/3 (ಕ್ಲಾಸೆನ್‌ 80, ಅಭಿಷೇಕ್‌ 63, ಹೆಡ್‌ 62, ಪಾಂಡ್ಯ 1-46), ಮುಂಬೈ 20 ಓವರಲ್ಲಿ 246/5 (ತಿಲಕ್‌ 64, ಡೇವಿಡ್‌ 42*, ಕಮಿನ್ಸ್‌ 2-35) 

ಪಂದ್ಯಶ್ರೇಷ್ಠ: ಅಭಿಷೇಕ್‌ ಶರ್ಮಾ. 

ಆರ್‌ಸಿಬಿ ದಾಖಲೆ ಮುರಿದ ಸನ್‌ರೈಸರ್ಸ್‌: ಐಪಿಎಲ್ ಇನ್ನಿಂಗ್ಸ್‌ನಲ್ಲಿ ಗರಿಷ್ಠ ರನ್‌ ಕಲೆಹಾಕಿದ ದಾಖಲೆ ಸನ್‌ರೈಸರ್ಸ್‌ ಪಾಲಾಗಿದೆ. 277 ರನ್‌ ಸಿಡಿಸಿದ ಸನ್‌ರೈಸರ್ಸ್‌, 10 ವರ್ಷಗಳಿಂದ ಆರ್‌ಸಿಬಿ ಹೆಸರಿನಲ್ಲಿದ್ದ 263 ರನ್‌ ದಾಖಲೆಯನ್ನು ಛಿದ್ರಗೊಳಿಸಿತು. 

2013ರಲ್ಲಿ ಆರ್‌ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪುಣೆ ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ಗೆ 263 ರನ್‌ ಕಲೆಹಾಕಿತ್ತು. ಆ ಪಂದ್ಯದಲ್ಲಿ ಕ್ರಿಸ್‌ ಗೇಲ್‌ 175 ರನ್‌ ಸಿಡಿಸಿದ್ದರು.

ಸಿಕ್ಸರ್‌ ಐಪಿಎಲ್‌ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಸಿಕ್ಸರ್‌. ಈ ಹಿಂದೆ 3 ಪಂದ್ಯಗಳಲ್ಲಿ ತಲಾ 33 ಸಿಕ್ಸರ್‌ಗಳು ದಾಖಲಾಗಿದ್ದವು.