ಸಾರಾಂಶ
ಪ್ಯಾರಿಸ್: ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಕಂಚು ವಿಜೇತ ಶೂಟರ್ ಸ್ವಪ್ನಿಲ್ ಕುಸಾಲೆ ಮಹಾರಾಷ್ಟ್ರ ಮೂಲದವರಾಗಿದ್ದು, ಕಳೆದ 15 ವರ್ಷಗಳಿಂದಲೂ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.
2016, 2020ರ ಒಲಿಂಪಿಕ್ಸ್‌ಗೇರುವ ಅವಕಾಶ ಕಳೆದುಕೊಂಡಿದ್ದ ಸ್ವಪ್ನಿಲ್, ಈ ಬಾರಿ ಪದಕ ಗೆಲ್ಲುತ್ತಾರೆ ಎಂದು ಊಹಿಸಿದವರು ಕಡಿಮೆ. ಆದರೆ ಅವರ ಅಭೂತಪೂರ್ವ ಪ್ರದರ್ಶನಕ್ಕೆ ಕಂಚು ಒಲಿದಿದೆ.
ಭಾರತದ ಮಾಜಿ ಕ್ರಿಕೆಟಿಗ ಎಂ.ಎಸ್.ಧೋನಿ ತಮಗೆ ಸ್ಫೂರ್ತಿ ಎಂದು ಹೇಳುವ ಸ್ವಪ್ನಿಲ್, ಧೋನಿ ಅವರಂತೆಯೇ ಭಾರತೀಯ ರೈಲ್ವೇ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಹುದ್ದೆ ಹೊಂದಿದ್ದಾರೆ. 2015ರಿಂದಲೂ ಅವರು ಕಲೆಕ್ಟರ್ ಆಗಿದ್ದಾರೆ. ಆದರೆ ಒಂದು ದಿನವೂ ಕಲೆಕ್ಟರ್ ಆಗಿ ಕೆಲಸ ಮಾಡಿಲ್ಲ. ಅವರು ಕ್ರೀಡೆಯಲ್ಲಿ ಸಕ್ರಿಯರಾಗಿರಲು ಇಲಾಖೆ ಅವರಿಗೆ ವರ್ಷ ಪೂರ್ತಿ ಸಹಿತ ಸಂಬಳ ರಜೆ ನೀಡುತ್ತಿದೆ.
ಸ್ವಪ್ನಿಲ್ 2012ರಲ್ಲೇ ಅಂತಾರಾಷ್ಟ್ರೀಯ ಶೂಟಿಂಗ್‌ಗೆ ಪಾದಾರ್ಪಣೆ ಮಾಡಿದರೂ, ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು 12 ವರ್ಷ ಕಾಯಬೇಕಾಯಿತು. ಅವರು 2021ರ ವಿಶ್ವಕಪ್, 2022ರ ಏಷ್ಯನ್ ಗೇಮ್ಸ್, 2024ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಸ್ವಪ್ನಿಲ್‌ರ ತಂದೆ ಹಾಗೂ ಅಣ್ಣ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದು, ತಾಯಿ ಕೋಲ್ಹಾಪುರ ಸಮೀಪದ ಕಾಂಬಲ್‌ವಾಡಿ ಗ್ರಾಮ ಪಂಚಾಯ್ತಿ ಮುಖ್ಯಸ್ಥೆ.
ಸ್ವಪ್ನಿಲ್ ವಿಶೇಷ ದಾಖಲೆ!
ಭಾರತದ ಶೂಟರ್ ಒಬ್ಬ ಒಲಿಂಪಿಕ್ಸ್‌ನ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಪದಕ ಗೆದ್ದಿದ್ದು ಇದೇ ಮೊದಲು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಜೊಯ್‌ದೀಪ್ ಕರ್ಮಕಾರ್ 50 ಮೀ. ರೈಫಲ್ ಪ್ರೋನ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದರು. ಆದರೆ 4ನೇ ಸ್ಥಾನ ಪಡೆದು ಪದಕದಿಂದ ವಂಚಿತರಾಗಿದ್ದರು.