ಸಾರಾಂಶ
ಹೈದರಾಬಾದ್: ನಿರ್ಣಾಯಕ ಪಂದ್ಯದಲ್ಲಿ ಸಿರಿಯಾ ವಿರುದ್ಧ 0-3 ಗೋಲುಗಳಿಂದ ಹೀನಾಯ ಸೋಲನುಭವಿಸಿದ ಭಾರತ ತಂಡ ಇಂಟರ್‌ಕಾಂಟಿನೆಂಟಲ್ ಫುಟ್ಬಾಲ್ ಟೂರ್ನಿಯಲ್ಲಿ ಟ್ರೋಫಿ ತಪ್ಪಿಸಿಕೊಂಡಿದೆ. 3 ತಂಡಗಳ ನಡುವಿನ ಟೂರ್ನಿಯ ಕೊನೆ ಪಂದ್ಯದಲ್ಲಿ ಸೋಮವಾರ ವಿಶ್ವ ನಂ.124 ಭಾರತ ತಂಡ ನೀರಸ ಪ್ರದರ್ಶನ ತೋರಿತು. 7ನೇ ನಿಮಿಷದಲ್ಲೇ ಮಹ್ಮೂದ್ ಅಲ್ ಅಸ್ವದ್ ಗೋಲು ಬಾರಿಸಿ ಸಿರಿಯಾಕ್ಕೆ ಮುನ್ನಡೆ ಒದಗಿಸಿದರು. ಬಳಿಕ ಡೆಲೆಹೊ ಇರನ್‌ಡಸ್ಟ್(76ನೇ ನಿಮಿಷ) ಹಾಗೂ ಪಾಬ್ಲೊ ಸಬ್ಬಗ್(96ನೇ ನಿಮಿಷ) ಮತ್ತೆರಡು ಗೋಲು ಬಾರಿಸಿ ಸಿರಿಯಾ ಗೆಲುವನ್ನು ಖಚಿತಪಡಿಸಿಕೊಂಡರು.ವಿಶ್ವ ರ್‍ಯಾಂಕಿಂಗ್‌ನಲ್ಲಿ 93ನೇ ಸ್ಥಾನದಲ್ಲಿರುವ ಸಿರಿಯಾ ಆರಂಭಿಕ ಪಂದ್ಯದಲ್ಲಿ ಮಾರಿಷಸ್ ವಿರುದ್ಧ 2-0 ಗೋಲುಗಳಲ್ಲಿ ಗೆದ್ದಿದ್ದರೆ, ಭಾರತ ತಂಡ ಮಾರಿಷಸ್ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಸಿರಿಯಾ 6 ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, ತಲಾ 1 ಅಂಕ ಗಳಿಸಿದ ಮಾರಿಷಸ್ ಹಾಗೂ ಭಾರತ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡವು.ಇದರೊಂದಿಗೆ ಭಾರತ 3ನೇ ಬಾರಿ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿತು. ಭಾರತ ಈ ಮೊದಲು 2018 ಹಾಗೂ 2023ರಲ್ಲಿ ಚಾಂಪಿಯನ್ ಆಗಿತ್ತು. ಅತ್ತ ಸಿರಿಯಾ ಇದೇ ಮೊದಲ ಬಾರಿ ಇಂಟರ್‌ಕಾಂಟಿನೆಂಟಲ್ ಟ್ರೋಫಿಯಲ್ಲಿ ಚಾಂಪಿಯನ್ ಎನಿಸಿಕೊಂಡಿದೆ.