20 ವಿಶ್ವಕಪ್‌: ಮಾಜಿ ಚಾಂಪಿಯನ್ಸ್‌ ಆಸೀಸ್‌, ಪಾಕ್‌ಗೆ ಶುಭಾರಂಭ ಗುರಿ

| Published : Jun 06 2024, 12:30 AM IST

20 ವಿಶ್ವಕಪ್‌: ಮಾಜಿ ಚಾಂಪಿಯನ್ಸ್‌ ಆಸೀಸ್‌, ಪಾಕ್‌ಗೆ ಶುಭಾರಂಭ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಆಸ್ಟ್ರೇಲಿಯಾಕ್ಕೆ ಒಮಾನ್‌ ಸವಾಲು ಎದುರಾಗಲಿದ್ದು, ಪಾಕಿಸ್ತಾನ ತಂಡದ ಆತಿಥೇಯ ಅಮೆರಿಕ ವಿರುದ್ಧ ಸೆಣಸಲಿದೆ. ಮತ್ತೊಂದು ಪಂದ್ಯದಲ್ಲಿ ಪಪುವಾ ನ್ಯೂ ಗಿನಿ ಹಾಗೂ ಉಗಾಂಡ ಮುಖಾಮುಖಿಯಾಗಲಿವೆ.

ಬ್ರಿಡ್ಜ್‌ಟೌನ್‌/ಟೆಕ್ಸಾಸ್‌: ಟಿ20 ವಿಶ್ವಕಪ್‌ನಲ್ಲಿ 2ನೇ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿರುವ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳು ಗುರುವಾರ 2024ರ ಟಿ20 ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸಿಲಿವೆ ಆಸ್ಟ್ರೇಲಿಯಾಕ್ಕೆ ಒಮಾನ್‌ ಸವಾಲು ಎದುರಾಗಲಿದ್ದು, ಪಾಕ್‌ ತಂಡ ಅಮೆರಿಕ ವಿರುದ್ಧ ಸೆಣಸಲಿದೆ.ಕಳೆದ ವರ್ಷ ಟೆಸ್ಟ್‌ ಚಾಂಪಿಯನ್‌ಶಿಪ್‌, ಏಕದಿನ ವಿಶ್ವಕಪ್‌ ಗೆದ್ದಿರುವ ಆಸ್ಟ್ರೇಲಿಯಾ ಈ ಬಾರಿ ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ಏಕಕಾಲದಲ್ಲಿ ಮೂರೂ ಮಾದರಿ ವಿಶ್ವಕಪ್‌ ಗೆದ್ದ ಸಾಧನೆ ಮಾಡುವ ಕಾತರದಲ್ಲಿದೆ. ಅದಕ್ಕೆ ಬೇಕಾದ ಸಿದ್ಧತೆಯೊಂದಿಗೆ ಆಸೀಸ್‌ ಆಗಮಿಸಿದ್ದು, ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಹಲವರು ತಂಡದಲ್ಲಿದ್ದಾರೆ. ಹೆಡ್‌, ವಾರ್ನರ್‌, ಮಿಚೆಲ್‌ ಮಾರ್ಷ್‌, ಗ್ರೀನ್‌, ಮ್ಯಾಕ್ಸ್‌ವೆಲ್‌, ಸ್ಟಾರ್ಕ್‌, ಕಮಿನ್ಸ್‌, ಸ್ಟೋಯ್ನಿಸ್‌ ಸೇರಿದಂತೆ ಘಟಾನುಘಟಿಗಳ ದಂಡೇ ಇದ್ದು, ಒಮಾನ್‌ ತಂಡವನ್ನು ಸುಲಭದಲ್ಲಿ ಮಣಿಸುವ ಗುರಿ ಇಟ್ಟುಕೊಂಡಿದೆ.ಅತ್ತ ಒಮಾನ್‌ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸೂಪರ್‌ ಓವರ್‌ನಲ್ಲಿ ಸೋತಿತ್ತು. ಕಡಿಮೆ ಮೊತ್ತ ದಾಖಲಿಸಿದರೂ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದ್ದ ತಂಡ ಆಸೀಸ್‌ಗೂ ಶಾಕ್‌ ನೀಡುವ ಕಾತರದಲ್ಲಿದೆ.ಪಂದ್ಯ: ಬೆಳಗ್ಗೆ 6 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌, ಡಿಡಿ ಸ್ಪೋರ್ಟ್ಸ್‌

ಪಾಕ್‌ಗೆ ಎದುರಾಗುತ್ತಾ ಕಠಿಣ ಸವಾಲು?

ಅಮೆರಿಕಕ್ಕೆ ಹೋಲಿಸಿದರೆ ಪಾಕ್‌ ಬಲಿಷ್ಠ ತಂಡ. ಆದರೆ ವಿಶ್ವಕಪ್‌ಗೂ ಮುನ್ನ ಬಾಂಗ್ಲಾ ವಿರುದ್ಧ ಸರಣಿ ಗೆದ್ದು, ಟೂರ್ನಿಯ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಭರ್ಜರಿ ಜಯಗಳಿಸಿದ್ದ ಅಮೆರಿಕ ತವರಿನಲ್ಲಿ ಮತ್ತೊಂದು ಗೆಲುವಿಗಾಗಿ ಕಾಯುತ್ತಿದೆ. ಹೀಗಾಗಿ ಪಾಕ್ ತನ್ನೆಲ್ಲಾ ಸಾಮರ್ಥ್ಯ ಉಪಯೋಗಿಸಿ ಪಂದ್ಯದಲ್ಲಿ ಆಡಬೇಕಿದೆ. ಟೂರ್ನಿಗೂ ಮುನ್ನ ಐರ್ಲೆಂಡ್‌, ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಸೋತಿರುವ ಪಾಕ್‌ಗೆ ಆತ್ಮವಿಶ್ವಾಸದ ಕೊರತೆಯಿದ್ದು, ಈ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಬಹುದು.

ಪಂದ್ಯ: ರಾತ್ರಿ 9 ಗಂಟೆಗೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌, ಡಿಡಿ ಸ್ಪೋರ್ಟ್ಸ್‌

ಪಪುವಾ vs ಉಗಾಂಡ

ಗುರುವಾರದ ಮತ್ತೊಂದು ಪಂದ್ಯದಲ್ಲಿ ಪಪುವಾ ನ್ಯೂ ಗಿನಿ ಹಾಗೂ ಉಗಾಂಡ ಪರಸ್ಪರ ಸೆಣಸಲಿವೆ. 2 ತಂಡಗಳೂ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದವು. ಎರಡು ತಂಡಗಳೂ ಮೊದಲ ಬಾರಿ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿದ್ದು, ಪಂದ್ಯಕ್ಕೆ ಮಳೆ ಅಡ್ಡಿಯಾಗದೆ ಇದ್ದರೆ, ಒಂದು ತಂಡಕ್ಕೆ ಗುರುವಾರ ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ಸಿಗಲಿದೆ. ಪಂದ್ಯ: ಬೆಳಗ್ಗೆ 5 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌, ಡಿಡಿ ಸ್ಪೋರ್ಟ್ಸ್‌