ಸಾರಾಂಶ
ಟೆಕ್ಸಾಸ್/ಗಯಾನಾ: 9ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತೀಯ ಕಾಲಮಾನ ಪ್ರಕಾರ ಭಾನುವಾರ ಅಧಿಕೃತ ಚಾಲನೆ ಸಿಗಲಿದೆ. 20 ತಂಡಗಳ ನಡುವಿನ ಹಣಾಹಣಿಗೆ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನ ಒಟ್ಟು 9 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಜೂ.29ರ ವರೆಗೆ ನಡೆಯಲಿರುವ ಟೂರ್ನಿಯಲ್ಲಿ ಫೈನಲ್ ಸೇರಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಮೊದಲ ದಿನವಾದ ಭಾನುವಾರ 2 ಪಂದ್ಯಗಳು ನಡೆಯಲಿವೆ.
ಅಮೆರಿಕ vs ಕೆನಡಾ
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಅಮೆರಿಕಕ್ಕೆ ಕೆನಡಾ ಸವಾಲು ಎದುರಾಗಲಿದೆ. ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಗೆದ್ದಿದ್ದ ಅಮೆರಿಕ ಚೊಚ್ಚಲ ಬಾರಿಗೆ ವಿಶ್ವಕಪ್ ಆಡುತ್ತಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ. ಕಳೆದ ತಿಂಗಳು ಕೆನಡಾ ವಿರುದ್ಧ ಅಮೆರಿಕ 4-0 ಅಂತರದಲ್ಲಿ ಟಿ20 ಸರಣಿ ಗೆದ್ದಿತ್ತು. ಹೀಗಾಗಿ ತಂಡ ಹೆಚ್ಚಿನ ಆತ್ಮವಿಶ್ವಾಸ ಹೊಂದಿದ್ದು, ತವರಿನಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುವ ಕಾತರದಲ್ಲಿದೆ. ಅತ್ತ ಕೆನಡಾ ವಿಶ್ವಕಪ್‌ಗೂ ಮುನ್ನ ಎದುರಾಗಿದ್ದ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ.
1844ರಲ್ಲೇ ಮೊದಲ ಪಂದ್ಯ ಆಡಿದ್ದ ಅಮೆರಿಕ-ಕೆನಡಾ!
ಕ್ರಿಕೆಟ್ ಇತಿಹಾಸದ ಅತ್ಯಂತ ಹಳೆಯ ಬದ್ಧವೈರಿಗಳಾದ ಅಮೆರಿಕ-ಕೆನಡಾ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗುತ್ತಿವೆ. ಆದರೆ ಇತ್ತಂಡಗಳು 1844ರಲ್ಲೇ 3 ದಿನಗಳ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಕೆನಡಾ 23 ರನ್‌ಗಳಿಂದ ಗೆದ್ದಿತ್ತು. ಬರೋಬ್ಬರಿ 180 ವರ್ಷ ಬಳಿಕ ವಿಶ್ವಕಪ್‌ನಲ್ಲಿ ಮತ್ತೆ ಎದುರಾಗುತ್ತಿವೆ.
ಪಂದ್ಯ ಆರಂಭ: ಬೆಳಗ್ಗೆ 6ಕ್ಕೆ,
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್.
ವಿಂಡೀಸ್ vs ಪಪುವಾ
ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ವೆಸ್ಟ್‌ಇಂಡೀಸ್ ಈ ಬಾರಿ ತವರಿನಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದ್ದು, ‘ಸಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾನುವಾರ ಪಪುವಾ ನ್ಯೂಗಿನಿ ವಿರುದ್ಧ ಸೆಣಸಾಡಲಿದೆ.2 ಬಾರಿ ಚಾಂಪಿಯನ್ ವಿಂಡೀಸ್ 2021ರಲ್ಲಿ ಆಡಿದ 5 ಪಂದ್ಯಗಳ ಪೈಕಿ 4ರಲ್ಲಿ ಪರಾಭವಗೊಂಡಿತ್ತು. ಕಳೆದ ವಿಶ್ವಕಪ್‌ನಲ್ಲಿ ಅರ್ಹತಾ ಸುತ್ತಿನಲ್ಲೇ ಆಘಾತಕಾರಿ ಸೋಲುಂಡು ಹೊರಬಿದ್ದಿತ್ತು. ಕಳೆದೆರಡು ಬಾರಿಯ ಕಹಿನೆನಪು ಮರೆತು ಈ ಬಾರಿ 3ನೇ ಟ್ರೋಫಿ ಎತ್ತಿಹಿಡಿಯುವ ನಿರೀಕ್ಷೆಯಲ್ಲಿದ್ದು, ತವರಿನ ಪಿಚ್‌ನ ಲಾಭವೆತ್ತಿ ಅಭೂತಪೂರ್ವ ಪ್ರದರ್ಶನ ನೀಡುವ ಕಾತರದಲ್ಲಿದೆ. 2 ಬಾರಿ ವಿಂಡೀಸ್‌ಗೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಸಮಿ ಈ ಬಾರಿ ಕೋಚ್ ಆಗಿದ್ದು, ಪೊವೆಲ್ ನಾಯಕತ್ವ ವಹಿಸಲಿದ್ದಾರೆ.ಅತ್ತ ಪಪುವಾ ನ್ಯೂಗಿನಿ ಈ ಮೊದಲು 2021ರಲ್ಲಿ ಟಿ20 ವಿಶ್ವಕಪ್ ಆಡಿದ್ದು, ಒಂದೂ ಪಂದ್ಯ ಗೆದ್ದಿರಲಿಲ್ಲ. ಈ ಬಾರಿ ಕೆಲ ಪಂದ್ಯಗಳನ್ನು ಗೆಲ್ಲುವ ನಿರೀಕ್ಷೆಯೊಂದಿಗೆ ಟೂರ್ನಿಗೆ ಕಾಲಿಡಲಿದ್ದು, ಆತಿಥೇಯರಿಗೆ ಶಾಕ್ ನೀಡಲು ಕಾಯುತ್ತಿದೆ.
ಪಂದ್ಯ ಆರಂಭ: ರಾತ್ರಿ 8ಕ್ಕೆ
, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್.