ವಿಶ್ವಕಪ್‌ನಲ್ಲಿ ಕೊನೆಗೂ ಕಿವೀಸ್‌ಗೆ ಗೆಲುವಿನ ಸಿಹಿ

| Published : Jun 16 2024, 01:51 AM IST / Updated: Jun 16 2024, 04:28 AM IST

ಸಾರಾಂಶ

ಉಗಾಂಡ 18.4 ಓವರ್‌ಗಳಲ್ಲಿ 40 ರನ್‌ಗೆ ಆಲೌಟಾಯಿತು. ಸುಲಭ ಗುರಿಯನ್ನು ಕಿವೀಸ್‌ ಕೇವಲ 5.2 ಓವರ್‌ಗಳಲ್ಲೇ ಬೆನ್ನತ್ತಿ ಜಯಗಳಿಸಿತು.

ಟ್ರಿನಿಡಾಡ್‌: ಈ ಬಾರಿ ಟಿ2 ವಿಶ್ವಕಪ್‌ನ ಸೂಪರ್‌-8 ರೇಸ್‌ನಿಂದ ಈಗಾಗಲೇ ಹೊರಬಿದ್ದಿರುವ 2021ರ ರನ್ನರ್‌-ಅಪ್‌ ನ್ಯೂಜಿಲೆಂಡ್‌, ಶನಿವಾರ ಉಗಾಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದೆ. ಸತತ 2 ಪಂದ್ಯ ಸೋತಿದ್ದ ಕಿವೀಸ್‌ ಕೊನೆಗೂ ಮೊದಲ ಜಯ ದಾಖಲಿಸಿ ‘ಸಿ’ ಗುಂಪಿನಲ್ಲಿ ಅಂಕ ಖಾತೆ ತೆರೆದರೆ, ಉಗಾಂಡ 3 ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿತು.

 ಮೊದಲು ಬ್ಯಾಟ್‌ ಮಾಡಿದ ಉಗಾಂಡ 18.4 ಓವರ್‌ಗಳಲ್ಲಿ 40 ರನ್‌ಗೆ ಆಲೌಟಾಯಿತು. 2 ರನ್‌ಗೇ 3 ವಿಕೆಟ್‌ ಕಳೆದುಕೊಂಡ ತಂಡ ಆ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಟ್ರೆಂಟ್‌ ಬೌಲ್ಟ್‌, ಸೌಥಿ ಮಾರಕ ವೇಗ, ಸ್ಯಾಂಟ್ನರ್‌, ರಚಿನ್ ರವೀಂದ್ರ ಸ್ಪಿನ್ ಮೋಡಿ ಮುಂದೆ ಉಗಾಂಡ ನಿರುತ್ತರವಾಯಿತು. 

ಸೌಥಿ 4 ಓವರಲ್ಲಿ 1 ಮೇಡಿನ್‌ ಸಹಿತ 4 ರನ್‌ಗೆ 3 ವಿಕೆಟ್‌ ಕಿತ್ತರೆ, ಬೌಲ್ಟ್‌, ಸ್ಯಾಂಟ್ನರ್‌ ಹಾಗೂ ರಚಿನ್‌ ತಲಾ 2 ವಿಕೆಟ್‌ ಪಡೆದರು.ಸುಲಭ ಗುರಿಯನ್ನು ಕಿವೀಸ್‌ ಕೇವಲ 5.2 ಓವರ್‌ಗಳಲ್ಲೇ ಬೆನ್ನತ್ತಿ ಜಯಗಳಿಸಿತು. ಡೆವೋನ್‌ ಕಾನ್ವೇ 15 ಎಸೆತಗಳಲ್ಲಿ 22 ರನ್‌ ಗಳಿಸಿದರು.ಸ್ಕೋರ್‌: ಉಗಾಂಡ 18.4 ಓವರಲ್ಲಿ 40/10 (ಕೆನ್ನೆತ್‌ 11, ಸೌಥಿ 3-4, ಬೌಲ್ಟ್‌ 2-7), ನ್ಯೂಜಿಲೆಂಡ್‌ 5.2 ಓವರಲ್ಲಿ 41/1 (ಕಾನ್ವೇ 22*, ಅಲಿ ಶಾ 1-10) ಪಂದ್ಯಶ್ರೇಷ್ಠ: ಟಿಮ್‌ ಸೌಥಿ

02ನೇ ಕನಿಷ್ಠ: ಕಿವೀಸ್‌ ವಿರುದ್ಧ ಉಗಾಂಡ ಗಳಿಸಿದ 40 ರನ್‌ ಟಿ20 ವಿಶ್ವಕಪ್‌ನಲ್ಲೇ 2ನೇ ಕನಿಷ್ಠ. ಇತ್ತೀಚೆಗೆ ವಿಂಡೀಸ್‌ ವಿರುದ್ಧ ಉಗಾಂಡ 39, 2014ರಲ್ಲಿ ಶ್ರೀಲಂಕಾ ವಿರುದ್ಧ ನೆದರ್‌ಲೆಂಡ್ಸ್ 39 ರನ್‌ಗೆ ಆಲೌಟಾಗಿದ್ದವು.