ಸಾರಾಂಶ
ಬೆಂಗಳೂರು : ಬೆಂಗಳೂರು ಓಪನ್ ಎಟಿಎಫ್ ಮಹಿಳಾ ಟೆನಿಸ್ ಟೂರ್ನಿಯಲ್ಲಿ ಭಾರತ ತನಿಶಾ ಕಶ್ಯಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಹಿರಿಯರ ವಿಭಾಗದಲ್ಲಿ ಪ್ರಶಸ್ತಿ ಬರ ನೀಗಿಸಿದರು.ಭಾನುವಾರ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ 22 ವರ್ಷ ತನಿಶಾ ಅವರು ಆಕಾಂಕ್ಷಾ ವಿರುದ್ಧ 6-7(5/7), 6-1, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಮೊದಲ ಸೆಟ್ ಕಳೆದುಕೊಂಡ ಹೊರತಾಗಿಯೂ ಬಳಿಕ 2 ಸೆಟ್‌ಗಳಲ್ಲಿ ತನಿಶಾ ಅಭೂತಪೂರ್ವ ಪ್ರದರ್ಶನ ನೀಡಿದರು. ಪಂದ್ಯ 2 ಗಂಟೆ, 19 ನಿಮಿಷ ಕಾಲ ನಡೆಯಿತು. ಆಕಾಂಕ್ಷಾ ಮಹಿಳಾ ಡಬಲ್ಸ್‌ನಲ್ಲೂ ಪ್ರಶಸ್ತಿ ತಪ್ಪಿಸಿಕೊಂಡರು. ಹುಮೇರಾ ಬಹಾರ್‌ಮಸ್ ಹಾಗೂ ಪೂಜಾ ಜೋಡಿ ಭಾನುವಾರ ನಡೆದ ಫೈನಲ್‌ನಲ್ಲಿ ಆಕಾಂಕ್ಷಾ-ಕರ್ನಾಟಕದ ಸೋಹಾ ಸಾದಿಕ್ ವಿರುದ್ಧ 6-3, 0-6, 6-10 ಅಂತರದಲ್ಲಿ ಜಯಭೇರಿ ಮೊಳಗಿಸಿ, ಟ್ರೋಫಿ ತನ್ನದಾಗಿಸಿಕೊಂಡಿತು.
ರಣಜಿ: ಕರ್ನಾಟಕದ ಸತತ 2ನೇ ಪಂದ್ಯ ಡ್ರಾ ಸಾಧ್ಯತೆ!
ಬೆಂಗಳೂರು: ದಶಕಗಳ ಬಳಿಕ ಟ್ರೋಫಿ ಗೆಲ್ಲುವ ನಿರೀಕ್ಷೆಯೊಂದಿಗೆ ಈ ಸಲ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕಾಲಿಟ್ಟಿದ್ದ ಕರ್ನಾಟಕಕ್ಕೆ ಮತ್ತೆ ಮತ್ತೆ ಅದೃಷ್ಠ ಕೈಕೊಡುತ್ತಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ತಂಡದ ಸತತ 2ನೇ ಪಂದ್ಯವೂ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳ್ಳದೆ ಡ್ರಾಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಕರ್ನಾಟಕ-ಕೇರಳ ನಡುವೆ ನಗರದ ಹೊರವಲಯದ ಆಲೂರಿನಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನದಾಟ ಮಳೆಗೆ ಆಹುತಿಯಾಯಿತು. ಮೊದಲ ದಿನ 23 ಹಾಗೂ 2ನೇ ದಿನ 27 ಓವರ್ ಆಟ ನಡೆದಿತ್ತು. 3ನೇ ದಿನ ಹೆಚ್ಚು ಮಳೆ ಇಲ್ಲದಿದ್ದರೂ ಮೈದಾನ ಸಂಪೂರ್ಣ ಒದ್ದೆಯಾಗಿದ್ದ ಕಾರಣ ಆಟ ನಡೆಯಲಿಲ್ಲ. ಸೋಮವಾರ ಕೊನೆ ದಿನವಾಗಿದ್ದು, ಪಂದ್ಯ ಡ್ರಾಗೊಳ್ಳುವುದು ಬಹುತೇಕ ಖಚಿತ ಎನಿಸಿಕೊಂಡಿದೆ. ಮೊದಲ ಇನ್ನಿಂಗ್ಸ್ ಪೂರ್ಣಗೊಳ್ಳದೆ ಪಂದ್ಯ ಡ್ರಾ ಆದರೆ ಇತ್ತಂಡಗಳು ತಲಾ ಒಂದು ಅಂಕ ಪಡೆಯುತ್ತವೆ. ಮಧ್ಯಪ್ರದೇಶ ವಿರುದ್ಧ ಮೊದಲ ಪಂದ್ಯದಲ್ಲೂ ರಾಜ್ಯ ತಂಡ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಂಡಿತ್ತು.