ಭಾರತ ಕೋಚ್‌ ಹುದ್ದೆಗೆ ಅರ್ಜಿ ಹಾಕಲು ಗಡುವು ಮುಕ್ತಾಯ: ಯಾರಾಗ್ತಾರೆ ಹೊಸ ಕೋಚ್‌?

| Published : May 28 2024, 01:00 AM IST / Updated: May 28 2024, 04:09 AM IST

ಭಾರತ ಕೋಚ್‌ ಹುದ್ದೆಗೆ ಅರ್ಜಿ ಹಾಕಲು ಗಡುವು ಮುಕ್ತಾಯ: ಯಾರಾಗ್ತಾರೆ ಹೊಸ ಕೋಚ್‌?
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ತಂಡದ ಕೋಚ್‌ ಹುದ್ದೆಗೆ ಯಾರ್‍ಯಾರು ಅರ್ಜಿ ಹಾಕಿದ್ದಾರೆ? ಸದ್ಯದಲ್ಲೇ ಹೊರಬೀಳಲಿದೆ ಅಂತಿಮ ಪಟ್ಟಿ. ಗೌತಮ್‌ ಗಂಭೀರ್‌ರನ್ನೇ ಕೋಚ್‌ ಆಗಿ ನೇಮಿಸಲಿದೆಯೇ ಬಿಸಿಸಿಐ?

ನವದೆಹಲಿ: ಭಾರತ ಪುರುಷರ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಗಡುವು ಸೋಮವಾರ ಸಂಜೆಗೆ ಮುಕ್ತಾಯಗೊಂಡಿದ್ದು, ಎಷ್ಟು ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿದೆ ಎನ್ನುವ ಮಾಹಿತಿಯನ್ನು ಇನ್ನೂ ಬಿಸಿಸಿಐ ಬಹಿರಂಗಪಡಿಸಿಲ್ಲ.

 ವಿದೇಶಿ ಕೋಚ್‌ಗಳನ್ನು ನೇಮಿಸುವ ಬಗ್ಗೆ ಬಿಸಿಸಿಐಗೆ ಆಸಕ್ತಿ ಇಲ್ಲ ಎನ್ನುವ ಸುಳಿವನ್ನು ಇತ್ತೀಚೆಗೆ ಕಾರ್ಯದರ್ಶಿ ಜಯ್‌ ಶಾ ನೀಡಿದ್ದರು. ಅಲ್ಲದೇ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ನಿರ್ದೇಶಕ ವಿವಿಎಸ್‌ ಲಕ್ಷ್ಮಣ್‌ ಸಹ ನಿರಾಸಕ್ತಿ ತೋರಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

 ಇದೀಗ ಎಲ್ಲರ ಕಣ್ಣು ಮಾಜಿ ಕ್ರಿಕೆಟಿಗ, ಹಾಲಿ ಐಪಿಎಲ್‌ ಚಾಂಪಿಯನ್‌ ಕೋಲ್ಕತಾ ನೈಟ್‌ರೈಡರ್ಸ್‌ ತಂಡದ ಮಾರ್ಗದರ್ಶಕ ಗೌತಮ್‌ ಗಂಭೀರ್‌ ಮೇಲಿದ್ದು, ನೂತನ ಕೋಚ್‌ ಆಗಿ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.ಸಾಮಾನ್ಯವಾಗಿ ಬಿಸಿಸಿಐ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಅಂತಿಮ ಸುತ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಲಿದ್ದು, ಬಳಿಕ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಲಿದೆ. ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ ಅಭ್ಯರ್ಥಿಗಳ ಸಂದರ್ಶನ ನಡೆಸಿ, ಸೂಕ್ತ ವ್ಯಕ್ತಿಯ ಹೆಸರನ್ನು ಕ್ರಿಕೆಟ್‌ ಮಂಡಳಿಗೆ ಶಿಫಾರಸು ಮಾಡಲಿದೆ.

ಟಿ20 ವಿಶ್ವಕಪ್‌ ಮುಗಿಯುವ ವರೆಗೂ ರಾಹುಲ್‌ ದ್ರಾವಿಡ್‌ ತಂಡದ ಕೋಚ್‌ ಆಗಿ ಇರಲಿದ್ದು, ಆ ನಂತರ ಹೊಸ ಕೋಚ್‌ನ ನೇಮಕವಾಗಲಿದೆ.