ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 51 ರನ್ ಸೋಲನುಭವಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿ 1-1 ಸಮಬಲಗೊಂಡಿದೆ.
ಮುಲ್ಲಾನ್‌ಪುರ: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 51 ರನ್ ಸೋಲನುಭವಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿ 1-1 ಸಮಬಲಗೊಂಡಿದೆ.
ಭಾರತೀಯ ಬೌಲರ್‌ಗಳ ಬೆವರಿಳಿಸಿದ ದ.ಆಫ್ರಿಕಾ 4 ವಿಕೆಟ್ ನಷ್ಟದಲ್ಲಿ 213 ರನ್ ಕಲೆಹಾಕಿತು. ತಂಡ 15 ಸಿಕ್ಸರ್‌ಗಳನ್ನು ಸಿಡಿಸಿತು. ಆರಂಭಿಕ ಆಟಗಾರ ಡಿ ಕಾಕ್ ಕೇವಲ 46 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 90 ರನ್ ಗಳಿಸಿದರು. ಡೊನೋವನ್ ಫೆರಿಯೆರಾ 16 ಎಸೆತಕ್ಕೆ 30, ಡೇವಿಡ್ ಮಿಲ್ಲರ್ 12 ಎಸೆತಕ್ಕೆ 20, ನಾಯಕ ಮಾರ್ಕ್‌ರಮ್ 29 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅರ್ಶ್‌ದೀಪ್ ಎಸೆದ 9 ವೈಡ್ ಸೇರಿದಂತೆ ಭಾರತ ಒಟ್ಟು 22 ರನ್‌ಗಳನ್ನು ಇತರೆ ರೂಪದಲ್ಲಿ ನೀಡಿ ಕೈಸುಟ್ಟುಕೊಂಡಿತು.
ದೊಡ್ಡ ಮೊತ್ತ ಬೆನ್ನತ್ತಿದ ಭಾರತಕ್ಕೆ ತಿಲಕ್ ವರ್ಮಾ ಹೊರತುಪಡಿಸಿ ಬೇರೆ ಯಾರೂ ನೆರವಾಗಲಿಲ್ಲ. ನಾಯಕ ಸೂರ್ಯಕುಮಾರ್(5 ರನ್), ಉಪನಾಯಕ ಶುಭ್‌ಮನ್ ಗಿಲ್(0) ಮತ್ತೆ ವೈಫಲ್ಯ ಅನುಭವಿಸಿದರು. ಅಕ್ಷರ್(21)ರನ್ನು 3ನೇ ಕ್ರಮಾಂಕದಲ್ಲಿ ಆಡಿಸಿದ ಯೋಜನೆಯೂ ಕೈಕೊಟ್ಟಿತು. ಅಭಿಷೇಕ್(17), ಹಾರ್ದಿಕ್(20), ಜಿತೇಶ್ ಶರ್ಮಾ(27) ಹೋರಾಟ ಸಾಕಾಗಲಿಲ್ಲ. ತಿಲಕ್ ವರ್ಮಾ(34 ಎಸೆತಕ್ಕೆ 62) ಏಕಾಂಗಿ ಹೋರಾಟ ನಡೆಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಭಾರತ 19.1 ಓವರ್‌ನಲ್ಲಿ 162ಕ್ಕೆ ಆಲೌಟಾಯಿತು. ಬಾರ್ಟ್‌ಮನ್ 4 ವಿಕೆಟ್ ಕಿತ್ತರು.
ಸ್ಕೋರ್: ದ.ಆಫ್ರಿಕಾ 20 ಓವರಲ್ಲಿ 213/4 (ಡಿ ಕಾಕ್ 90, ಫೆರಿಯೆರಾ 30*, ವರುಣ್ 2-29), ಭಾರತ 19.1 ಓವರಲ್ಲಿ 162/10 (ತಿಲಕ್ 62, ಜಿತೇಶ್ 27, ಬಾರ್ಟ್‌ಮನ್ 4-24)
ಪಂದ್ಯಶ್ರೇಷ್ಠ: ಡಿ ಕಾಕ್
05 ಫಿಫ್ಟಿ
ಭಾರತ ವಿರುದ್ಧ ಟಿ20ಯಲ್ಲಿ ಗರಿಷ್ಠ ಬಾರಿ 50+ ರನ್ ಗಳಿಸಿದ ಆಟಗಾರರಲ್ಲಿ ಡಿ ಕಾಕ್ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಪೂರನ್, ಬಟ್ಲರ್, ಡಿ ಕಾಕ್ ತಲಾ 5 ಬಾರಿ ಈ ಸಾಧನೆ ಮಾಡಿದ್ದಾರೆ.
54 ರನ್
ಅರ್ಶ್‌ದೀಪ್ 4 ಓವರ್‌ಗಳಲ್ಲಿ 54 ರನ್ ಬಿಟ್ಟುಕೊಟ್ಟರು. ಇದು ಅವರ 2ನೇ ಗರಿಷ್ಠ. 2022ರಲ್ಲಿ ದ.ಆಫ್ರಿಕಾ ವಿರುದ್ಧ ಗುವಾಹಟಿಯಲ್ಲಿ 62 ರನ್ ನೀಡಿದ್ದರು.
16 ವೈಡ್
ಭಾರತ 16 ವೈಡ್ ನೀಡಿತು. ಇದು ತಂಡದ ಜಂಟಿ 2ನೇ ಗರಿಷ್ಠ. 2009ರಲ್ಲಿ ಲಂಕಾ ವಿರುದ್ಧ 17 ವೈಡ್, 2018ರಲ್ಲಿ ವಿಂಡೀಸ್ ವಿರುದ್ಧ 16 ವೈಡ್ ಬಿಟ್ಟುಕೊಟ್ಟಿತ್ತು.
213 ರನ್
ದ.ಆಫ್ರಿಕಾ 213 ರನ್ ಗಳಿಸಿತು. ಇದು ಭಾರತ ವಿರುದ್ಧ ದ.ಆಫ್ರಿಕಾದ 4ನೇ ಗರಿಷ್ಠ. 2022ರಲ್ಲಿ 3 ವಿಕೆಟ್‌ಗೆ 227 ರನ್ ಗಳಿಸಿದ್ದು ಈಗಲೂ ದಾಖಲೆ.
ಅರ್ಶ್‌ದೀಪ್ ಒಂದೇಓವರ್‌ನಲ್ಲಿ 7 ವೈಡ್:
ಅಂ.ರಾ. ದಾಖಲೆ
ದ.ಆಫ್ರಿಕಾದ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಅರ್ಶ್‌ದೀಪ್ ಸಿಂಗ್ 7 ವೈಡ್ ಸೇರಿ ಒಟ್ಟು 18 ರನ್ ನೀಡಿದರು. ಇದರೊಂದಿಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಒಂದೇ ಓವರ್‌ನಲ್ಲಿ 7 ವೈಡ್ ಮೊದಲ ಬೌಲರ್ ಎಂಬ ಕುಖ್ಯಾತಿಗೆ ಅರ್ಶ್‌ದೀಪ್ ಪಾತ್ರರಾದರು. ಇನ್ನು, ಅಂ.ರಾ ಟಿ20ಯಲ್ಲಿ ಜಂಟಿ ಅತಿ ದೀರ್ಘ ಓವರ್(13 ಎಸೆತ) ಎಂಬ ಕೆಟ್ಟ ದಾಖಲೆಯನ್ನೂ ಅರ್ಶ್‌ದೀಪ್ ತಮ್ಮದಾಗಿಸಿಕೊಂಡರು. 2024ರಲ್ಲಿ ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ತಾನದ ನವೀನ್ ಉಲ್ ಹಕ್ ಕೂಡಾ 13 ಎಸೆತ ದಾಖಲಿಸಿದ್ದರು. ಅದರಲ್ಲಿ 6 ವೈಡ್‌ಗಳಿದ್ದವು.

