ಸಾರಾಂಶ
ನವದೆಹಲಿ: ಭಾರತೀಯ ಫುಟ್ಬಾಲ್‌ನ ದುಸ್ಥಿತಿಗೆ ಮಾಜಿ ನಾಯಕ, ದಿಗ್ಗಜ ಫುಟ್ಬಾಲಿಗ ಸುನಿಲ್ ಚೆಟ್ರಿ ಮರುಗಿದ್ದಾರೆ. ದೇಶದ ಫುಟ್ಬಾಲ್ ವ್ಯವಸ್ಥೆ ಆತಂಕ, ನೋವು ಹಾಗೂ ಭಯ ಹುಟ್ಟಿಸುವಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ದೇಸಿ ಫುಟ್ಬಾಲ್‌ನ ಅಡಿಪಾಯ ಎನಿಸಿಕೊಂಡಿದ್ದ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಸ್) ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿರುವ ಬಗ್ಗೆ ಚೆಟ್ರಿ ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ಭಾರತದ ಫುಟ್ಬಾಲ್ ವ್ಯವಸ್ಥೆಯಲ್ಲಿರುವ ಎಲ್ಲರೂ ನೋವು, ಭಯ, ಆತಂಕದಲ್ಲಿದ್ದಾರೆ. ದೇಶದ ಈಗಿನ ಫುಟ್ಬಾಲ್ ಸ್ಥಿತಿಗತಿ ಕಳವಳಕಾರಿ. ಐಎಸ್‌ಎಲ್ ಸ್ಥಗಿತಗೊಂಡಿರುವ ಬಗ್ಗೆ ಆಟಗಾರರು, ಕೋಚ್‌ಗಳು, ಸಿಬ್ಬಂದಿ, ಫಿಸಿಯೋ ಎಲ್ಲರೂ ನನ್ನಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಿರುಗಾಳಿಯನ್ನು ನಾವು ಒಟ್ಟಿಗೆ ಎದುರಿಸುತ್ತೇವೆ. ಒಟ್ಟಿಗೆ ಇರಿ ಮತ್ತು ತರಬೇತಿ ಮುಂದುವರಿಸಿ. ಫುಟ್ಬಾಲ್ ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ’ ಎಂದು ತಿಳಿಸಿದ್ದಾರೆ. 2013ರಲ್ಲಿ ಐಎಸ್‌ಎಲ್ ಆರಂಭಗೊಂಡಿತ್ತು. ಆದರೆ ಆಯೋಜಕರು ಹಾಗೂ ಎಐಎಫ್‌ಎಫ್ ನಡುವೆ ಒಪ್ಪಂದ ಕೊನೆಗೊಂಡಿರುವ ಹಿನ್ನೆಲೆಯಲ್ಲಿ 2025-26ರ ಆವೃತ್ತಿ ನಡೆಯುವುದು ಅನುಮಾನವೆನಿಸಿದೆ.