ಸಾರಾಂಶ
ದುಬೈ: 11ನೇ ಆವೃತ್ತಿಯ ಐಸಿಸಿ ಅಂಡರ್-19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಸೋಲಿನ ಆರಂಭ ಪಡೆದಿದೆ. ಶನಿವಾರ ‘ಎ’ ಗುಂಪಿನ ಆರಂಭಿಕ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ 43 ರನ್‌ಗಳಿಂದ ಪರಾಭವಗೊಂಡಿತು.
ಇದು ಪಾಕ್ ವಿರುದ್ಧ ಭಾರತಕ್ಕೆ ಸತತ 3ನೇ ಸೋಲು.ಮೊದಲು ಬ್ಯಾಟ್ ಮಾಡಿದ ಪಾಕ್ 50 ಓವರಲ್ಲಿ 7 ವಿಕೆಟ್‌ಗೆ 281 ರನ್ ಕಲೆಹಾಕಿತು. ಮೊದಲ ವಿಕೆಟ್‌ಗೆ ಉಸ್ಮಾನ್ ಖಾನ್(60) ಜತೆ 160 ರನ್ ಜೊತೆಯಾಟವಾಡಿದ ಶಾಹ್‌ಜೈಬ್ ಖಾನ್ 159 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ ಪರ ಸಮರ್ಥ್ ನಾಗರಾಜ್ 3 ವಿಕೆಟ್ ಕಿತ್ತರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿ 47.1 ಓವರ್‌ಗಳಲ್ಲಿ 238 ರನ್‌ಗೆ ಆಲೌಟಾಯಿತು. ನಿಖಿಲ್ ಕುಮಾರ್ 67, ಮೊಹಮದ್ ಇನಾನ್ 30 ರನ್ ಗಳಿಸಿದರು.
ಭಾರತ ಗುಂಪು ಹಂತದ ಮುಂದಿನ ಪಂದ್ಯದಲ್ಲಿ ಡಿ.2ರಂದು ಜಪಾನ್ ವಿರುದ್ಧ ಸೆಣಸಾಡಲಿದೆ.
ಇಂಗ್ಲೆಂಡ್ ವಿರುದ್ಧ ಕಿವೀಸ್ ಸೋಲಿನತ್ತ
ಕ್ರೈಸ್ಟ್‌ಚರ್ಚ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ನ್ಯೂಜಿಲೆಂಡ್ ಸೋಲಿನ ಭೀತಿಯಲ್ಲಿದೆ. ಕಿವೀಸ್‌ನ 348 ರನ್‌ಗೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 499 ರನ್ ಗಳಿಸಿ, 151 ರನ್ ಮುನ್ನಡೆ ಪಡೆಯಿತು. ಹ್ಯಾರಿ ಬ್ರೂಕ್ 171 ರನ್ ಗಳಿಸಿದರು. 2ನೇ ಇನ್ನಿಂಗ್ಸ್‌ನಲ್ಲಿ ಕಿವೀಸ್ 3ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 155 ರನ್ ಗಳಿಸಿದ್ದು, ಕೇವಲ 4 ರನ್ ಮುನ್ನಡೆಯಲ್ಲಿದೆ.