ಸಾರಾಂಶ
ಬ್ಲೂಮ್‌ಫಂಟೀನ್(ದ.ಆಫ್ರಿಕಾ): ನಿರೀಕ್ಷೆಗಳ ಭಾರಗಳನ್ನು ಹೊತ್ತುಕೊಂಡು ವಿಶ್ವದೆಲ್ಲೆಡೆಯ ಯುವ ಕ್ರಿಕೆಟ್ ತಾರೆಗಳು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದು, ಶುಕ್ರವಾರದಿಂದ ಆರಂಭಗೊಳ್ಳಲಿರುವ ಬಹುನಿರೀಕ್ಷಿತ ಅಂಡರ್-19 ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಸಾಮರ್ಥ್ಯ ಪರೀಕ್ಷೆಗೆ ಇಳಿಯಲಿದ್ದಾರೆ.
15ನೇ ಆವೃತ್ತಿ ಕಿರಿಯರ ಏಕದಿನ ವಿಶ್ವಕಪ್‌ಗೆ ಶುಕ್ರವಾರ ಬ್ಲೂಮ್‌ಫಂಟೀನ್ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.ಈ ಬಾರಿ ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, ದ.ಆಫ್ರಿಕಾದ 5 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ.
ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಅಮೆರಿಕ ಹಾಗೂ ಐರ್ಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಮತ್ತೊಂದು ಪಂದ್ಯದಲ್ಲಿ ಆತಿಥೇಯ ದ.ಆಫ್ರಿಕಾ ಜೊತೆ ವೆಸ್ಟ್‌ಇಂಡೀಸ್ ಸೆಣಸಾಡಲಿದೆ.
5 ಬಾರಿ ಚಾಂಪಿಯನ್ ಭಾರತ ತಂಡ ಅಮೆರಿಕ, ಬಾಂಗ್ಲಾದೇಶ, ಐರ್ಲೆಂಡ್ ಜೊತೆ ‘ಎ’ ಗುಂಪಿನಲ್ಲಿದ್ದು, ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶನಿವಾರ ಕಣಕ್ಕಿಳಿಯಲಿದೆ. ಫೆ.11ರಂದು ಫೈನಲ್ ಪಂದ್ಯ ನಿಗದಿಯಾಗಿದೆ.
ಟೂರ್ನಿ ಮಾದರಿ: 16 ತಂಡಗಳನ್ನು ತಲಾ 4 ತಂಡಗಳು 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನ ಪ್ರತಿ ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ತಲಾ 1 ಬಾರಿ ಮುಖಾಮುಖಿಯಾಗಲಿದ್ದು, ಅಗ್ರ-3 ತಂಡಗಳು ಸೂಪರ್-6 ಹಂತ ಪ್ರವೇಶಿಸಲಿವೆ.
ಸೂಪರ್-6 ಹಂತದಲ್ಲಿ ತಲಾ 6 ತಂಡಗಳ 2 ಗುಂಪುಗಳಿರಲಿದ್ದು, ಅಗ್ರ-2 ತಂಡಗಳು ಸೆಮಿಫೈನಲ್ ಪ್ರವೇಶೀಸಲಿವೆ.
ಭಾರತದ ವೇಳಾಪಟ್ಟಿಎದುರಾಳಿ ದಿನಾಂಕ ಸಮಯ: ಬಾಂಗ್ಲಾದೇಶ ಜ.20 ಮಧ್ಯಾಹ್ನ 1.30ಐರ್ಲೆಂಡ್ ಜ.25 ಮಧ್ಯಾಹ್ನ 1.30ಅಮೆರಿಕ ಜ.28 ಮಧ್ಯಾಹ್ನ 1.30
ಭಾರತಕ್ಕೆ ಆರನೇಪ್ರಶಸ್ತಿ ಮೇಲೆ ಕಣ್ಣು: ಟೂರ್ನಿಯ ಈ ವರೆಗಿನ ಇತಿಹಾಸ ಗಮನಿಸಿದರೆ ಭಾರತ ಹೆಚ್ಚಿನ ಯಶಸ್ಸು ಸಾಧಿಸಿದ್ದು, ಈ ವರೆಗೆ 5 ಬಾರಿ(2000, 2008, 2012, 2018, 2022) ಚಾಂಪಿಯನ್ ಆಗಿವೆ. ಈ ಬಾರಿ 6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
ಉಳಿದಂತೆ ಆಸ್ಟ್ರೇಲಿಯಾ 3, ಪಾಕಿಸ್ತಾನ 2, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ದ.ಆಫ್ರಿಕಾ, ಬಾಂಗ್ಲಾದೇಶ ತಲಾ 1 ಬಾರಿ ಪ್ರಶಸ್ತಿ ಗೆದ್ದಿವೆ.
16 ತಂಡಗಳ: ಈ ಬಾರಿ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
41 ದಿನ: ಟೂರ್ನಿಯು ಫೆ.11ರ ವರೆಗೆ ಅಂದರೆ ಒಟ್ಟು 41 ದಿನಗಳ ಕಾಲ ನಡೆಯಲಿದೆ.