ನಿಲ್ಲದ ಮೈಕ್ರೋಫೈನಾನ್ಸ್‌ ದಾದಾಗಿರಿ : ಸರ್ಕಾರದ ಕಠಿಣ ಕ್ರಮದ ಎಚ್ಚರಿಕೆಯ ಹೊರತೂ ಬೆದರಿಕೆ

| N/A | Published : Jan 25 2025, 09:54 AM IST / Updated: Jan 25 2025, 09:57 AM IST

Finance Horoscope 2025

ಸಾರಾಂಶ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಬೆದರಿಕೆ ವರ್ತನೆ ವಿರುದ್ಧ ಕಠಿಣ ಕ್ರಮದ ಕುರಿತು ರಾಜ್ಯ ಸರ್ಕಾರದ ಎಚ್ಚರಿಕೆಯ ಹೊರತಾಗಿಯೂ, ಹಣಕಾಸು ಸಂಸ್ಥೆಗಳ ದಾದಾಗಿರಿ ಮುಂದುವರೆದಿದ್ದು ಜನರನ್ನು ಹೈರಾಣಾಗಿಸಿದೆ

  ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಬೆದರಿಕೆ ವರ್ತನೆ ವಿರುದ್ಧ ಕಠಿಣ ಕ್ರಮದ ಕುರಿತು ರಾಜ್ಯ ಸರ್ಕಾರದ ಎಚ್ಚರಿಕೆಯ ಹೊರತಾಗಿಯೂ, ಹಣಕಾಸು ಸಂಸ್ಥೆಗಳ ದಾದಾಗಿರಿ ಮುಂದುವರೆದಿದ್ದು ಜನರನ್ನು ಹೈರಾಣಾಗಿಸಿದೆ.

 ಸಾಲ ನೀಡಿದವರ ಕಿರುಕುಳದಿಂದ ರಾಜ್ಯದಲ್ಲಿ ಮತ್ತೆ ಎರಡು ಸಾವು ಸಂಭವಿಸಿದ್ದರೆ, ಹಸುಗೂಸು ಜೊತೆಗೆ ಇರುವ ಬಾಣಂತಿಯನ್ನು ಮನೆಯಿಂದ ಹೊರಹಾಕಿದ, ಸಾಲಗಾರರ ಕಾಟಕ್ಕೆ ಹೆದರಿ ಯುವಕನೊಬ್ಬ ಮನೆಯನ್ನೇ ತೊರೆದ ಘಟನೆಗಳು ನಡೆದಿವೆ.ಈ ನಡುವೆ ಮೈಕ್ರೋಫೈನಾನ್ಸ್‌ ಸಿಬ್ಬಂದಿಗಳ ವಿರುದ್ಧ ರಾಜ್ಯದ ಹಲವೆಡೆ ಶುಕ್ರವಾರ ಪ್ರತಿಭಟನೆ ನಡೆದಿದ್ದು, ಇಂಥ ಹಣಕಾಸು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ಇಬ್ಬರ ಸಾವು:

ಹಾವೇರಿ ಜಿಲ್ಲೆ ಬಂಕಾಪುರದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಾಳಲಾರದೆ ಕಿರಾಣಿ ಅಂಗಡಿ ಮಾಲಿಕ ನಾಗಪ್ಪ ಪುಟ್ಟಪ್ಪ ಗುಂಜಾಳ (36) ನೇಣಿಗೆ ಶರಣಾಗಿದ್ದಾರೆ. ಇವರು ಸುಮಾರು 15 ಲಕ್ಷ ರು. ಸಾಲ ಮಾಡಿಕೊಂಡಿದ್ದರು. ಬೀದರ್‌ ಜಿಲ್ಲೆ ಹುಲಸೂರ ತಾಲೂಕಿನ ಗಡಿಗೌಡಗಾಂವ್‌ ಗ್ರಾಮದ ರೇಷ್ಮಾ ಸುನೀಲ ಸೂರ್ಯವಂಶಿ (26) ಎಂಬ ದಲಿತ ಮಹಿಳೆ ಕೂಡ ಫೈನಾನ್ಸ್‌ ಸಿಬ್ಬಂದಿಯ ಕಿರುಕುಳದಿಂದ ನೇಣಿಗೆ ಶರಣಾಗಿದ್ದಾರೆ. ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇವರು, ಸುಮಾರು ₹3 ಲಕ್ಷ ಸಾಲ ಪಡೆದು ಮನೆಗೆ ಶೆಡ್‌ ಹಾಕಿಸಿದ್ದರು.

ಈ ಮಧ್ಯೆ, ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಕೊಪ್ಪರಸಿಕೊಪ್ಪದ ಸಾವಿತ್ರಮ್ಮ ವಡ್ಡರ ಎಂಬುವರು ಫೈನಾನ್ಸ್‌ನವರ ಕಿರುಕುಳ ತಾಳಲಾರದೆ ಊರನ್ನೇ ತೊರೆದಿದ್ದಾರೆ. ಸ್ಪಂದನ ಮೈಕ್ರೋ ಫೈನಾನ್ಸ್ ನಿಂದ ಅವರು ತಮ್ಮ ಸಂಬಂಧಿಯೊಬ್ಬರಿಗೆ ಸಾಲ ಕೊಡಿಸಿದ್ದರು. ಶಿವಮೊಗ್ಗದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದ ಶ್ರೀನಿವಾಸ್‌ ಎಂಬುವರು ಫೈನಾನ್ಸ್‌ ಸಿಬ್ಬಂದಿಯ ಕಿರುಕುಳ ತಾಳದೆ, ಹೇರ್ ಕಟಿಂಗ್ ಸಲೂನ್ ಮಾರಿ ಊರನ್ನೇ ಬಿಟ್ಟಿದ್ದಾರೆ. ಮಗ ಮಾಡಿದ ಸಾಲಕ್ಕೆ ವಯೋವೃದ್ಧ ತಂದೆ ಹೈರಾಣಾಗಿದ್ದು, ಮಗ ಮಾರಾಟ ಮಾಡಿದ ಸಲೂನ್‌ನಲ್ಲಿ ಅಪ್ಪ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಈ ಮಧ್ಯೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಗಣಪತಿ ರಾಮಚಂದ್ರ ಲೋಹಾರ ಎಂಬುವರ ಮನೆಗೆ ಸಾಲ ವಸೂಲಾತಿಗೆ ಬಂದ ಖಾಸಗಿ ಫೈನಾನ್ಸ್‌ ಸಿಬ್ಬಂದಿ 1 ತಿಂಗಳ ಬಾಣಂತಿ ಹಾಗೂ ಹಸುಗೂಸನ್ನು ಸೇರಿ ಎಲ್ಲರನ್ನೂ ಮನೆಯಿಂದ ಹೊರಗೆ ಹಾಕಿ, ಮನೆಯನ್ನು ಹರಾಜಿಗಿಟ್ಟಿದ್ದರು. 5 ವರ್ಷದ ಹಿಂದೆ ಮನೆ ಕಟ್ಟಿಸಲು ಇವರು ₹5 ಲಕ್ಷ ಸಾಲ ಪಡೆದಿದ್ದು, ವೃದ್ಧ ತಾಯಿಗೆ ಅನಾರೋಗ್ಯ ಮತ್ತು ಮಗಳಿಗೆ ಹೆರಿಗೆಯಾದ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿಂದ ಸಾಲದ ಕಂತು ಮರುಪಾವತಿಸಿರಲಿಲ್ಲ.

ವಿಷಯ ತಿಳಿದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆಸ್ಪತ್ರೆಯಿಂದಲೇ ಅಧಿಕಾರಿಗಳಿಗೆ ಸೂಚನೆ ನೀಡಿ, ಸಂತ್ರಸ್ತ ಕುಟುಂಬದ ನೆರವಿಗೆ ಬಂದಿದ್ದಾರೆ.