ನನ್ನ ವಿರುದ್ಧ ಕುಸ್ತಿ ಫೆಡರೇಶನ್‌ ಷಡ್ಯಂತ್ರ: ವಿನೇಶ್‌ ಫೋಗಟ್‌

| Published : Apr 13 2024, 01:04 AM IST / Updated: Apr 13 2024, 04:01 AM IST

ಸಾರಾಂಶ

ಭಾರತೀಯ ಕುಸ್ತಿ ಫೆಡರೇಶನ್‌ ವಿರುದ್ಧ ವಿನೇಶ್‌ ಫೋಗಟ್‌ ಹೊಸ ಆರೋಪ. ಕುಸ್ತಿ ಫೆಡರೇಶನ್‌ ಅಧ್ಯಕ್ಷ ಸಂಜಯ್‌ ಸಿಂಗ್‌ ನನ್ನ ಒಲಿಂಪಿಕ್ಸ್‌ ಕನಸಿಗೆ ಕೊಳ್ಳಿಯಿಡಲು ಪ್ರಯತ್ನಿಸುತ್ತಿದ್ದಾರೆ. ನನ್ನನ್ನು ಡೋಪಿಂಗ್‌ ಪ್ರಕರಣದಲ್ಲಿ ಸಿಲುಕಿಸಬಹುದು ಎನ್ನುವ ಭಯ ಇದೆ ಎಂದಿರುವ ವಿನೇಶ್‌.

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ) ವಿರುದ್ಧ ತಾರಾ ಕುಸ್ತಿಪಟು ವಿನೇಶ್‌ ಫೋಗಟ್‌ ಮತ್ತೊಂದು ಹೊಸ ಆರೋಪ ಮಾಡಿದ್ದಾರೆ. ತಾವು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯದಂತೆ ಫೆಡರೇಶನ್‌ ಅಧ್ಯಕ್ಷ ಸಂಜಯ್‌ ಸಿಂಗ್‌ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ವಿನೇಶ್‌ ಟ್ವೀಟರ್‌ನಲ್ಲಿ ಆರೋಪಿಸಿದ್ದಾರೆ. 

‘ನಾನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡುವುದನ್ನು ತಡೆಯಲು ಡಬ್ಲ್ಯುಎಫ್‌ಐ ಸಕಲ ಪ್ರಯತ್ನ ನಡೆಸುತ್ತಿದೆ. ಒಲಿಂಪಿಕ್‌ ಅರ್ಹತಾ ಟೂರ್ನಿಗೆ ನನ್ನ ವೈಯಕ್ತಿಕ ಕೋಚ್‌ಗಳನ್ನು ಕರೆದೊಯ್ಯಲು ಅಡ್ಡಿ ಮಾಡಲಾಗುತ್ತಿದೆ. ಡಬ್ಲ್ಯುಎಫ್‌ಐ ತನ್ನ ಹಿಡಿತದಲ್ಲಿರುವ ಕೋಚ್‌ಗಳನ್ನು ಬಳಸಿಕೊಂಡು ನನ್ನನ್ನು ಡೋಪಿಂಗ್‌ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಸಿದರೂ ಅಚ್ಚರಿಯಿಲ್ಲ’ ಎಂದು ವಿನೇಶ್‌ ಹೇಳಿದ್ದಾರೆ.ವಿನೇಶ್‌ರಿಂದ ಅರ್ಜಿ ಸಲ್ಲಿಕೆ ವಿಳಂಬ:

ಕುಸ್ತಿ ಫೆಡರೇಶನ್‌ನಿಂದ ಸ್ಪಷ್ಟನೆ

ವಿನೇಶ್‌ ಫೋಗಟ್‌ರ ಆರೋಪವನ್ನು ಭಾರತೀಯ ಕುಸ್ತಿ ಫೆಡರೇಶನ್‌ ತಳ್ಳಿಹಾಕಿದೆ. ವೈಯಕ್ತಿಕ ಕೋಚ್‌ಗಳನ್ನು ಕರೆದೊಯ್ಯಬೇಕಿದ್ದರೆ ಮಾ.11ರೊಳಗೆ ವಿಶ್ವ ಕುಸ್ತಿ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕಿತ್ತು. ವಿನೇಶ್‌ ಮಾ.18ಕ್ಕೆ ಅರ್ಜಿ ಹಾಕಿದ್ದಾರೆ. ಹೀಗಾಗಿ ಮಾನ್ಯತೆ ದೊರೆತಿಲ್ಲ ಎಂದು ಡಬ್ಲ್ಯುಎಫ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.