ಸಾರಾಂಶ
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ವೇಳೆ ತಾವು ಆಸ್ಪತ್ರೆಗೆ ದಾಖಲಾಗಿದ್ದಾಗ ಕ್ಲಿಕ್ಕಿಸಿದ ಫೋಟೋವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಕ್ಕೆ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ನನಗೆ ಸರಿಯಾದ ಬೆಂಬಲ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿನೇಶ್, ‘ಉಷಾ ಮೇಡಂ ಆಸ್ಪತ್ರೆಗೆ ಬಂದು, ನನ್ನಲ್ಲಿ ಕೇಳದೆ ಫೋಟೋ ಕ್ಲಿಕ್ಕಿಸಿ ತೆರಳಿದರು. ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು, ನಾವು ಜೊತೆಗಿದ್ದೇವೆ ಎಂದರು. ಆದರೆ 4 ಗೋಡೆಗಳ ಮಧ್ಯೆ ತುಂಬಾ ರಾಜಕೀಯ ನಡೆಯುತ್ತಿದೆ. ಪ್ಯಾರಿಸ್‌ನಲ್ಲೂ ರಾಜಕೀಯ ನಡೆದಿದೆ. ಇದರಿಂದಾಗಿಯೇ ನನ್ನ ಹೃದಯ ಒಡೆದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂಬೈನಿಂದ ಲಖನೌಗೆ ಇರಾನಿ ಕಪ್ ಪಂದ್ಯ ಶಿಫ್ಟ್
ಲಖನೌ: ಅ.1ರಿಂದ ಆರಂಭಗೊಳ್ಳಲಿರುವ ಇರಾನಿ ಕಪ್ ಪ್ರಥಮ ದರ್ಜೆ ಪಂದ್ಯವನ್ನು ಬಿಸಿಸಿಐ ಮುಂಬೈನಿಂದ ಲಖನೌಗೆ ಸ್ಥಳಾಂತರಿಸಿದೆ. ಹಾಲಿ ರಣಜಿ ಚಾಂಪಿಯನ್ ಮುಂಬೈ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಪಂದ್ಯ ಮೊದಲು ಮುಂಬೈನಲ್ಲಿ ನಿಗದಿಯಾಗಿತ್ತಾದರೂ, ನಗರದಲ್ಲಿ ಭಾರಿ ಮಳೆ ಮುನ್ಸೂಚನೆ ಇರುವ ಕಾರಣ ಲಖನೌ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಇದೇ ಮೊದಲ ಬಾರಿ ಲಖನೌದಲ್ಲಿ ಇರಾನಿ ಕಪ್ ಪಂದ್ಯ ನಡೆಯಲಿದೆ.