ಬ್ರಿಜ್‌ರನ್ನು ಅಧಿಕಾರದಿಂದ ದೂರವಿಡಿ: ಪ್ರಧಾನಿಗೆ ವಿನೇಶ್‌ ಒತ್ತಾಯ

| Published : Mar 20 2024, 01:15 AM IST

ಸಾರಾಂಶ

ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್ಐ) ಮೇಲೆ ಹೇರಿದ್ದ ಅಮಾನತ್ತನ್ನು ತೆರವುಗೊಳಿಸಿದ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ನಿರ್ಧಾರವನ್ನು ಕುಸ್ತಿಪಟುಗಳಾದ ವಿನೇಶ್‌ ಫೋಗಟ್‌, ಸಾಕ್ಷಿ ಮಲಿಕ್‌ ಟೀಕಿಸಿದ್ದಾರೆ. ಬ್ರಿಜ್‌ ಅವರನ್ನು ಅಧಿಕಾರದಿಂದ ದೂರವಿಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್ಐ) ಮೇಲೆ ಹೇರಿದ್ದ ಅಮಾನತ್ತನ್ನು ತೆರವುಗೊಳಿಸಿದ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ನಿರ್ಧಾರವನ್ನು ಕುಸ್ತಿಪಟುಗಳಾದ ವಿನೇಶ್‌ ಫೋಗಟ್‌, ಸಾಕ್ಷಿ ಮಲಿಕ್‌ ಟೀಕಿಸಿದ್ದಾರೆ.ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಪ್ರತಿಭಟನೆ ನಡೆಸಿದ್ದ ಈ ಇಬ್ಬರು, ಸಾಮಾಜಿಕ ತಾಣಗಳಲ್ಲಿ ಮತ್ತೆ ಬ್ರಿಜ್‌ ವಿರುದ್ಧ ಹರಿಹಾಯ್ದಿದ್ದು, ಅವರನ್ನು ಅಧಿಕಾರದಿಂದ ದೂರವಿಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.‘ನಾರಿ ಶಕ್ತಿ ಬಗ್ಗೆ ಮಾತನಾಡುವ ನೀವು ನಮಗೇಕೆ ನ್ಯಾಯ ಕೊಡಿಸುತ್ತಿಲ್ಲ. ಮಹಿಳಾ ಸಬಲೀಕರಣ ವಿಚಾರವನ್ನು ಕೇವಲ ರಕ್ಷಾ ಕವಚದಂತೆ ಬಳಸದೆ, ನಮ್ಮ ಧ್ವನಿಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿರುವವರಿಂದ ನಮ್ಮನ್ನು ಕಾಪಾಡುತ್ತೀರಿ ಎಂದು ವಿಶ್ವಾಸವಿಟ್ಟುಕೊಂಡಿದ್ದೇವೆ’ ಎಂದು ವಿನೇಶ್‌ ಟ್ವೀಟ್‌ ಮಾಡಿದ್ದಾರೆ.ಬ್ರಿಜ್‌ಭೂಷಣ್‌ ಹಾಗೂ ಅವರ ಕುಟುಂಬಸ್ಥರು ಕುಸ್ತಿ ಫೆಡರೇಶನ್‌ನ ಆಡಳಿತದಿಂದ ದೂರ ಉಳಿದಿದ್ದರೂ, ಬ್ರಿಜ್‌ಭೂಷಣ್‌ರ ಆಪ್ತ ಸಂಜಯ್‌ ಸಿಂಗ್‌ ಡಬ್ಲ್ಯುಎಫ್‌ಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹುದ್ದೆಯಲ್ಲಿ ಸಂಜಯ್‌ ಸಿಂಗ್‌ ಇರುವುದು ಒಂದೇ, ಬ್ರಿಜ್‌ಭೂಷಣ್‌ ಇರುವುದೂ ಒಂದೇ. ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಸಾಕ್ಷಿ ಮಲಿಕ್‌ ಒತ್ತಾಯಿಸಿದ್ದಾರೆ.