ಕೊಹ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿ. ಒಟ್ಟಾರೆ ವಿಶ್ವದಲ್ಲಿ ಕೊಹ್ಲಿಗೂ ಮುನ್ನ ಐವರು ಟಿ20 ಕ್ರಿಕೆಟ್‌ನಲ್ಲಿ 12000 ರನ್ ಮೈಲುಗಲ್ಲು ಸಾಧಿಸಿದ್ದರು.

ಚೆನ್ನೈ: 17ನೇ ಆವೃತ್ತಿ ಐಪಿಎಲ್‌ನ ಮೊದಲ ಪಂದ್ಯದಲ್ಲೇ ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಕೆಲ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಶುಕ್ರವಾರ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ಗಳ ಮೈಲುಗಲ್ಲು ಸಾಧಿಸಿದರು.

ಟಿ20 ಕ್ರಿಕೆಟ್‌ನಲ್ಲಿ 12000 ರನ್‌ ಪೂರ್ಣಗೊಳಿಸಿದ ಭಾರತದ ಮೊದಲ ಮತ್ತು ವಿಶ್ವದ 6ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

ಈ ಮೊದಲು ವೆಸ್ಟ್‌ಇಂಡೀಸ್‌ನ ಕ್ರಿಸ್‌ ಗೇಲ್‌(14562), ಪಾಕಿಸ್ತಾನದ ಶೋಯೆಬ್‌ ಮಲಿಕ್‌(13360), ವಿಂಡೀಸ್‌ನ ಕೀರನ್‌ ಪೊಲ್ಲಾರ್ಡ್‌(12900), ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್‌(12319) ಹಾಗೂ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌(12065) ಈ ಸಾಧನೆ ಮಾಡಿದ್ದಾರೆ.

ಕೊಹ್ಲಿ ವೇಗವಾಗಿ 12000 ರನ್‌ ಪೂರ್ತಿಗೊಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅವರು 360ನೇ ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ಸಾಧಿಸಿದರು. ಗೇಲ್‌ ಕೇವಲ 345 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು. 

ಚೆನ್ನೈ ವಿರುದ್ಧ 1000 ರನ್‌: ಕೊಹ್ಲಿ ಚೆನ್ನೈ ವಿರುದ್ಧ 1000 ರನ್‌ ಪೂರ್ಣಗೊಳಿಸಿದರು. ಈ ಮೂಲಕ ಐಪಿಎಲ್‌ನ 2 ತಂಡಗಳ ವಿರುದ್ಧ 1000 ರನ್‌ ಕಲೆಹಾಕಿದ 2ನೇ ಆಟಗಾರ ಎನಿಸಿಕೊಂಡರು. 

ಡೇವಿಡ್‌ ವಾರ್ನರ್‌ ಅವರು ಪಂಜಾಬ್‌ ಹಾಗೂ ಕೋಲ್ಕತಾ ವಿರುದ್ಧ ತಲಾ 1000ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಕೊಹ್ಲಿ ಈ ಮೊದಲು ಡೆಲ್ಲಿ ವಿರುದ್ಧವೂ ಈ ಸಾಧನೆ ಮಾಡಿದ್ದರು.

 ಇನ್ನು, ಚೆನ್ನೈ ವಿರುದ್ಧ ಈ 1000 ರನ್‌ ಕಲೆಹಾಕಿದ 2ನೇ ಬ್ಯಾಟರ್‌ ಕೊಹ್ಲಿ. ಶಿಖರ್‌ ಧವನ್‌ ಕೂಡಾ ಚೆನ್ನೈ ವಿರುದ್ಧ ಈ ಸಾಧನೆ ಮಾಡಿದ್ದಾರೆ.