ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27000 ರನ್‌: ಕಿಂಗ್‌ ಕೊಹ್ಲಿ ಮತ್ತೊಂದು ದಾಖಲೆ!

| Published : Oct 01 2024, 01:16 AM IST / Updated: Oct 01 2024, 04:20 AM IST

ಸಾರಾಂಶ

ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎಂಬ ಖ್ಯಾತಿ. ಒಟ್ಟಾರೆ 4ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್‌ ಕೊಹ್ಲಿ ಪಾತ್ರರಾದರು.

ಕಾನ್ಪುರ: ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಶುಕ್ರವಾರ ಬಾಂಗ್ಲಾದೇಶ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 35 ಎಸೆತಗಳಲ್ಲಿ 47 ರನ್‌ ಸಿಡಿಸಿದ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27000 ರನ್ ಸರದಾರರ ಎಲೈಟ್‌ ಕ್ಲಬ್‌ ಸೇರ್ಪಡೆಗೊಂಡರು. 

ಅಲ್ಲದೆ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಹಾಗೂ ಒಟ್ಟಾರೆ 4ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊಹ್ಲಿ ತಮ್ಮ 594ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ‘ಕ್ರಿಕೆಟ್‌ ದೇವರು’ ಖ್ಯಾತಿಯ ಸಚಿನ್ ತೆಂಡುಲ್ಕರ್‌ 623, ಶ್ರೀಲಂಕಾದ ಕುಮಾರ ಸಂಗಕ್ಕರ 648, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ 650 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಇಬ್ಬರನ್ನು ಕೊಹ್ಲಿ ಹಿಂದಿಕ್ಕಿದರು.

ಕೊಹ್ಲಿ ಟೆಸ್ಟ್‌ನಲ್ಲಿ 194 ಇನ್ನಿಂಗ್ಸ್‌ಗಳಲ್ಲಿ 8918, ಏಕದಿನದ 283 ಇನ್ನಿಂಗ್ಸ್‌ಗಳಲ್ಲಿ 13906 ಹಾಗೂ ಅಂತಾರಾಷ್ಟ್ರೀಯ ಟಿ20ಯ 117 ಇನ್ನಿಂಗ್ಸ್‌ಗಳಲ್ಲಿ 4188 ರನ್‌ ಕಲೆಹಾಕಿದ್ದಾರೆ.

ವರ್ಷದಲ್ಲಿ ಗರಿಷ್ಠ ಸಿಕ್ಸರ್‌: ಭಾರತ ಈಗ ನಂಬರ್‌ 1

ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ದೇಶ ಎಂಬ ದಾಖಲೆಯನ್ನು ಭಾರತ ತನ್ನ ಹೆಸರಿಗೆ ಬರೆದುಕೊಂಡಿದೆ. ಶುಕ್ರವಾರ ಬಾಂಗ್ಲಾ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 11 ಸಿಕ್ಸರ್ ಸಿಡಿಸಿತು. ಈ ಮೂಲಕ ಈ ವರ್ಷದ ಟೆಸ್ಟ್‌ ಸಿಕ್ಸರ್‌ ಸಂಖ್ಯೆಯನ್ನು 96ಕ್ಕೆ ಹೆಚ್ಚಿಸಿತು. ಇಂಗ್ಲೆಂಡ್‌ 2022ರಲ್ಲಿ 89 ಸಿಕ್ಸರ್‌ಗಳನ್ನು ಬಾರಿಸಿದ್ದು ಈ ವರೆಗಿನ ದಾಖಲೆಯಾಗಿತ್ತು.

 ಇನ್ನು, ಎಲ್ಲಾ 3 ಮಾದರಿಯಲ್ಲೂ ವರ್ಷದಲ್ಲಿ ಗರಿಷ್ಠ ಸಿಕ್ಸರ್ ದಾಖಲೆ ಈಗ ಭಾರತದ ಹೆಸರಲ್ಲಿದೆ. ಕಳೆದ ವರ್ಷ ಟೀಂ ಇಂಡಿಯಾ ಏಕದಿನದಲ್ಲಿ 250 ಸಿಕ್ಸರ್‌ ಸಿಡಿಸಿ, ದಕ್ಷಿಣ ಆಫ್ರಿಕಾ(2023ರಲ್ಲಿ 225 ಸಿಕ್ಸರ್) ದಾಖಲೆ ಮುರಿದಿತ್ತು. ಟಿ20ಯಲ್ಲಿ 2022ರಲ್ಲಿ ಭಾರತ 289 ಸಿಕ್ಸರ್‌ ಸಿಡಿಸಿದೆ. ವಿಂಡೀಸ್‌ 2021ರಲ್ಲಿ 214 ಸಿಕ್ಸರ್‌ ಬಾರಿಸಿತ್ತು.