ಸಾರಾಂಶ
ವಿರಾಟ್ ಕೊಹ್ಲಿ ಈಗ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಗರಿಷ್ಠ ಸಿಕ್ಸರ್ ಸರದಾರ. ಕ್ರಿಸ್ ಗೇಲ್‌ರ 239 ಸಿಕ್ಸರ್ ದಾಖಲೆ ಮುರಿದ ರನ್ ಮಷಿನ್. ಐಪಿಎಲ್‌ನಲ್ಲಿ ಕೊಹ್ಲಿಯ ಸಿಕ್ಸರ್ ಗಳಿಕೆ 241ಕ್ಕೆ ಏರಿಕೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತಿಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ. ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ 4 ಸಿಕ್ಸರ್ ಸಿಡಿಸುವ ಮೂಲಕ, ತಮ್ಮ ಒಟ್ಟು ಸಿಕ್ಸರ್‌ಗಳ ಸಂಖ್ಯೆಯನ್ನು 241ಕ್ಕೆ ಹೆಚ್ಚಿಸಿಕೊಂಡು, ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.ಗೇಲ್ ಆರ್‌ಸಿಬಿ ಪರ 239 ಸಿಕ್ಸರ್ ಬಾರಿಸಿದ್ದಾರೆ. ಎಬಿ ಡಿ ವಿಲಿಯರ್ಸ್ 238 ಸಿಕ್ಸರ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಇನ್ನು ಐಪಿಎಲ್‌ನಲ್ಲಿ ತಂಡವೊಂದರ ಪರ ಅತಿಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯೂ ಕೊಹ್ಲಿ ಹೆಸರಲ್ಲೇ ಇದೆ. ಮುಂಬೈ ಪರ 223 ಸಿಕ್ಸರ್ ಸಿಡಿಸಿರುವ ಪೊಲ್ಲಾರ್ಡ್, ಚೆನ್ನೈ ಪರ 209 ಸಿಕ್ಸರ್ ಚಚ್ಚಿರುವ ಧೋನಿ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿದ್ದಾರೆ. ಚಿನ್ನಸ್ವಾಮಿಯಲ್ಲಿ 250 ಬೌಂಡರಿ: ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಐಪಿಎಲ್ ಪಂದ್ಯಗಳಲ್ಲಿ 250 ಬೌಂಡರಿಗಳನ್ನು ಪೂರೈಸಿದ್ದಾರೆ. ಕೆಕೆಆರ್ ವಿರುದ್ಧದ ಇನ್ನಿಂಗ್ಸ್‌ನಲ್ಲಿ 4 ಬೌಂಡರಿಗಳಿದ್ದವು.ಕೊಹ್ಲಿ-ಗಂಭೀರ್ ದೋಸ್ತಿ!
ಕಳೆದ ವರ್ಷ ಮೈದಾನದಲ್ಲಿ ಕಚ್ಚಾಡಿಕೊಂಡಿದ್ದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್, ಶುಕ್ರವಾರ ಪಂದ್ಯದ ಮೊದಲ ಇನ್ನಿಂಗ್ಸ್‌ನ ವಿರಾಮದ ವೇಳೆ ದೋಸ್ತಿ ಪ್ರದರ್ಶಿಸಿದರು. ತಮ್ಮ ಆಟಗಾರರಿಗೆ ಸಲಹೆ ನೀಡುವ ಸಲುವಾಗಿ ಮೈದಾನಕ್ಕಿಳಿದಿದ್ದ ಕೆಕೆಆರ್‌ನ ಮೆಂಟರ್ ಗಂಭೀರ್, ಕೊಹ್ಲಿಯ ಬಳಿ ಬಂದು ಅವರನ್ನು ತಬ್ಬಿಕೊಂಡು ಅಭಿನಂದಿಸಿದರು. ಇವರಿಬ್ಬರ ಮಾತುಕತೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.