ಸಾರಾಂಶ
ಕೊಲಂಬೊ: ಐಸಿಸಿ ತಮ್ಮ ಮೇಲೆ ವಿಧಿಸಿರುವ 2 ಪಂದ್ಯಗಳ ನಿಷೇಧ ಶಿಕ್ಷೆಯನ್ನು ಮುಂಬರುವ ಟಿ20 ವಿಶ್ವಕಪ್‌ಗೂ ಮುನ್ನವೇ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶ್ರೀಲಂಕಾದ ತಾರಾ ಆಲ್ರೌಂಡರ್ ವಾನಿಂಡು ಹಸರಂಗ ಅವರು ಟೆಸ್ಟ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಇತ್ತೀಚೆಗೆ ಲಂಕಾದ ಬದ್ಧವೈರಿ ಬಾಂಗ್ಲಾದೇಶ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿದ್ದಕ್ಕೆ ಐಸಿಸಿ ಹಸರಂಗ ಅವರಿಗೆ ನಿಷೇಧ ಹೇರಿತ್ತು. 2 ಟೆಸ್ಟ್ ಅಥವಾ 4 ಏಕದಿನ ಅಥವಾ 4 ಟಿ20 ಪಂದ್ಯಗಳಲ್ಲಿ ಆಡದಂತೆ ಹಸರಂಗಗೆ ನಿರ್ಬಂಧ ವಿಧಿಸಿತ್ತು. ಆದರೆ ಹಸರಂಗ ಅವರು ಕಳೆದ ವರ್ಷದ ಆಗಸ್ಟ್‌ನಲ್ಲೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಸದ್ಯಕ್ಕೆ ಲಂಕಾಕ್ಕೆ ಯಾವುದೇ ತಂಡದ ವಿರುದ್ಧ ಏಕದಿನ ಸರಣಿ ಕೂಡಾ ಇಲ್ಲ. ಹೀಗಾಗಿ ಜೂನ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ನ ಮೊದಲ 4 ಪಂದ್ಯಗಳಿಂದ ಹಸರಂಗ ಹೊರಗುಳಿಯಬೇಕಿತ್ತು. ಇದನ್ನು ತಪ್ಪಿಸಲು ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ಲಂಕಾ ತಂಡಕ್ಕೆ ಹಸರಂಗ ಅವರನ್ನು ಆಯ್ಕೆ ಮಾಡಲಾಗಿದ್ದು, ತಾಂತ್ರಿಕವಾಗಿ ತಮ್ಮ ಮೇಲೆ ಹೇರಿರುವ 2 ಪಂದ್ಯಗಳ ನಿಷೇಧವನ್ನು ಈ ಎರಡು ಟೆಸ್ಟ್‌ಗಳಲ್ಲಿ ಪೂರ್ತಿಗೊಳಿಸಲಿದ್ದಾರೆ. ಆದರೆ ಹಸರಂಗ ಅವರ ನಡೆಗೆ ಹಲವರಿಂದ ವಿರೋಧ ವ್ಯಕ್ತವಾಗಿದೆ.ಟೆಸ್ಟ್ ಸರಣಿಯಿಂದ ಹಸರಂಗ ಹೊರಗುಳಿಯಲಿರುವ ಕಾರಣ 17ನೇ ಆವೃತ್ತಿ ಐಪಿಎಲ್‌ನಲ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ ಪರ ಎಲ್ಲಾ ಪಂದ್ಯಗಳನ್ನು ಆಡುವ ನಿರೀಕ್ಷೆ ಇದೆ.