ಸಾರಾಂಶ
ನವದೆಹಲಿ: ಐಪಿಎಲ್‌ನ ಆರ್‌ಸಿಬಿ ತಂಡ ಸೇರ್ಪಡೆ ಬಗ್ಗೆ ಹರಡುತ್ತಿರುವ ವದಂತಿಗಳ ಬಗ್ಗೆ ತಾರಾ ಕ್ರಿಕೆಟಿಗ ರಿಷಭ್ ಪಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ ಎಂದು ಹರಿಹಾಯ್ದಿದ್ದಾರೆ.
‘ರಿಷಭ್ ಆರ್‌ಸಿಬಿ ಮಾಲಿಕರ ಜೊತೆ ಮಾತುಕತೆಯಲ್ಲಿದ್ದಾರೆ. ಆದರೆ ರಿಷಭ್ ಆರ್‌ಸಿಬಿ ಸೇರುವುದು ವಿರಾಟ್ ಕೊಹ್ಲಿ ವಿರೋಧಿಸಿದ್ದಾರೆ’ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಿಷಭ್, ‘ಸುಳ್ಳು ಸುದ್ದಿ. ಸಾಮಾಜಿಕ ತಾಣಗಳಲ್ಲಿ ಇಂತಹ ಸುಳ್ಳು ಸುದ್ದಿ ಯಾಕೆ ಹರಡುತ್ತೀರಿ. ಸೂಕ್ಷ್ಮತೆಯಿಂದ ವರ್ತಿಸಿ. ಸತ್ಯವಲ್ಲದ ಸುದ್ದಿಗಳನ್ನು ಸೃಷ್ಟಿಸಬೇಡಿ. ಇಂತಹ ಸುದ್ದಿಗಳು ಹರಡುವುದು ಇದು ಮೊದಲಲ್ಲ, ಕೊನೆಯೂ ಅಲ್ಲ. ಸುದ್ದಿ ಹರಡುವ ಮುನ್ನ ನಿಮ್ಮದೇ ಸ್ವಯಂಘೋಷಿತ ಮೂಲಗಳಲ್ಲಿ ಖಚಿತಪಡಿಸಿಕೊಳ್ಳಿ.
ದಿನಕಳೆದಂತೆ ಸುಳ್ಳುಸುದ್ದಿ ವ್ಯಾಪಕವಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ. ರಿಷಭ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದು, ಅವರನ್ನು ಫ್ರಾಂಚೈಸಿಯು ಹರಾಜಿಗೂ ಮುನ್ನ ತಂಡಕ್ಕೆ ರೀಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ.
ಬ್ಯಾಡ್ಮಿಂಟನ್: ಕ್ವಾರ್ಟರ್‌ಗೆ ಕಿದಂಬಿ, ತ್ರೀಸಾ-ಗಾಯತ್ರಿ
ಮಕಾವ್: ಮಕಾವ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಹಾಗೂ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್, ಭಾರತದವರೇ ಆದ ಆಯುಶ್ ಶೆಟ್ಟಿ ವಿರುದ್ಧ 21-13, 21-18 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 2021ರ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಶ್ರೀಕಾಂತ್, ಕ್ವಾರ್ಟರ್‌ನಲ್ಲಿ ಹಾಂಕಾಂಗ್‌ನ ಕಾ ಲೊಂಗ್ ಆ್ಯಂಗುಸ್ ವಿರುದ್ಧ ಆಡಲಿದ್ದಾರೆ.
ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ ಜೋಡಿ ಚೈನೀಸ್ ತೈಪೆಯ ಲಿನ್ ಚೀಹ್ ಚುನ್ ಹಾಗೂ ಟೆಂಗ್ ಚುನ್ ವಿರುದ್ಧ 22-20, 21-11ರಲ್ಲಿ ಗೆಲುವು ಸಾಧಿಸಿತು. ಮಹಿಳಾ ಸಿಂಗಲ್ಸ್‌ನಲ್ಲಿ ತಸ್ನೀಂ ಮೀರ್, ಮಿಶ್ರ ಡಬಲ್ಸ್‌ನಲ್ಲಿ ಸುಮೀತ್ ರೆಡ್ಡಿ-ಸಿಕ್ಕಿ ರೆಡ್ಡಿ ಸೋಲನುಭವಿಸಿದರು.