ಮಹಿಳಾ ಏಷ್ಯಾಕಪ್‌: ಹ್ಯಾಟ್ರಿಕ್‌ ಗೆಲುವಿನೊಂದಿಗೆ ಭಾರತ ಸೆಮಿಫೈನಲ್‌ಗೆ : ಪಾಕ್ ಕೂಡ ಸೆಮೀಸ್‌ಗೆ

| Published : Jul 24 2024, 12:19 AM IST / Updated: Jul 24 2024, 04:30 AM IST

ಸಾರಾಂಶ

ಭಾರತ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಟೂರ್ನಿಯಲ್ಲಿ ಅಂತಿಮ 4ರ ಘಟ್ಟ ಪ್ರವೇಶಿಸಿತು. ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ ಸೋತ ಹೊರತಾಗಿಯೂ ಬಳಿಕ ಸತತ 2 ಪಂದ್ಯ ಗೆದ್ದ ಪಾಕಿಸ್ತಾನ ಕೂಡಾ ಸೆಮಿಫೈನಲ್‌ ಪ್ರವೇಶಿಸಿದೆ.

ದಾಂಬುಲಾ: 9ನೇ ಆವೃತ್ತಿ ಮಹಿಳಾ ಏಷ್ಯಾಕಪ್‌ನಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಬುಧವಾರ ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಭಾರತ ತಂಡ ನೇಪಾಳ ವಿರುದ್ಧ 82 ರನ್‌ ಜಯಭೇರಿ ಬಾರಿಸಿತು. 

ಇದರೊಂದಿಗೆ ನೇಪಾಳ ಗುಂಪು ಹಂತದಲ್ಲೇ ಹೊರಬಿತ್ತು.ಮೊದಲು ಬ್ಯಾಟ್‌ ಮಾಡಿದ ಭಾರತ 3 ವಿಕೆಟ್‌ಗೆ 178 ರನ್‌ ಗಳಿಸಿತು. ಶಫಾಲಿ ವರ್ಮಾ 48 ಎಸೆತಗಳಲ್ಲಿ 81 ರನ್‌ ಸಿಡಿಸಿದರೆ, ದಯಾಳನ್‌ ಹೇಮಲತಾ 47, ಜೆಮಿಮಾ ರೋಡ್ರಿಗ್ಸ್‌ 28 ರನ್‌ ಗಳಿಸಿದರು.ದೊಡ್ಡ ಗುರಿಯನ್ನು ಬೆನ್ನತ್ತಿದ ನೇಪಾಳ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ ಕೇವಲ 96 ರನ್ ಗಳಿಸಿ ಸೋಲೊಪ್ಪಿಕೊಂಡಿತು. 2ನೇ ಓವರ್‌ನಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡ ಬಳಿಕ ಚೇತರಿಸಿಕೊಳ್ಳಲಿಲ್ಲ. ದೀಪ್ತಿ ಶರ್ಮಾ 3 ವಿಕೆಟ್ ಕಬಳಿಸಿದರು.

ಪಾಕಿಸ್ತಾನ ಸೆಮಿಫೈನಲ್‌ಗೆ

ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ ಸೋತ ಹೊರತಾಗಿಯೂ ಬಳಿಕ ಸತತ 2 ಪಂದ್ಯ ಗೆದ್ದ ಪಾಕಿಸ್ತಾನ ಸೆಮಿಫೈನಲ್‌ ಪ್ರವೇಶಿಸಿದೆ. ಬುಧವಾರ ನಿರ್ಣಾಯಕ ಪಂದ್ಯದಲ್ಲಿ ಪಾಕ್‌ ತಂಡ ಯುಎಇ ವಿರುದ್ಧ 10 ವಿಕೆಟ್‌ ಗೆಲುವು ಸಾಧಿಸಿತು. ಯುಎಇ ಸತತ 3 ಪಂದ್ಯಗಳ ಸೋಲಿನೊಂದಿಗೆ ‘ಎ’ ಗುಂಪಿನಲ್ಲಿ ಕೊನೆ ಸ್ಥಾನಿಯಾಗಿ ಟೂರ್ನಿಯಿಂದ ಹೊರಬಿತ್ತು.